ಭುವನೇಶ್ವರ: ನಿರ್ಮಾಣ ಹಂತದ ಮಲದ ಗುಂಡಿಯಲ್ಲಿ ಉಸಿರುಗಟ್ಟಿ 6 ಕಾರ್ಮಿಕರು ಮೃತಪಟ್ಟಿರುವ ಭೀಕರ ಘಟನೆ ಒಡಿಶಾದ ಕಾಳಹಂಡಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮದನ್‌ಪುರ-ರಾಂಪುರದಲ್ಲಿ ಈ ದುರಂತ ಸಂಭವಿಸಿದೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟವರನ್ನು ಮೂವರು ಮೇಸ್ತ್ರಿಗಳು, ಒಬ್ಬ ಕಾರ್ಮಿಕ, ಸೆಪ್ಟಿಕ್ ಟ್ಯಾಂಕ್ ನಿರ್ಮಿಸುತ್ತಿದ್ದ ಮಾಲೀಕ ಮತ್ತು ಅವರ ಮಗ ಎಂದು ಗುರುತಿಸಲಾಗಿದೆ.
ನಿರ್ಮಾಣ ಕೆಲಸಕ್ಕಾಗಿ ಸೆಪ್ಟಿಕ್ ಟ್ಯಾಂಕ್ ನ ಒಂದು ಭಾಗವನ್ನು ತೆರೆದಾಗ, ಮಾಲೀಕರು ಆಕಸ್ಮಿಕವಾಗಿ ಅದರೊಳಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಉಳಿದವರು ಒಬ್ಬರ ಹಿಂದೆ ಒಬ್ಬರಂತೆ ಟ್ಯಾಂಕ್ ಗೆ ಇಳಿದಾಗ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಮೃತರ ಕುಟುಂಬಗಳಿಗೆ ತಲಾ ರೂ.4 ಲಕ್ಷ ಪರಿಹಾರ ಘೋಷಿಸಿದ್ದಾರೆ.