2026-05-27 12:10:29

ಸಿಎಂ ಬದಲಾವಣೆ: ಅಂತಿಮ ನಿರ್ಧಾರಕ್ಕೆ ಬರುವಲ್ಲಿ ಹೈಕಮಾಂಡ್‌ ವಿಫಲ; ಮುಂದುವರೆದ ಗೊಂದಲ| Speed News Kannada

ಸಿಎಂ ಬದಲಾವಣೆ: ಅಂತಿಮ ನಿರ್ಧಾರಕ್ಕೆ ಬರುವಲ್ಲಿ ಹೈಕಮಾಂಡ್‌ ವಿಫಲ; ಮುಂದುವರೆದ ಗೊಂದಲ| Speed News Kannada

ನವದೆಹಲಿ: ಇಂದು ಕೇವಲ ರಾಜ್ಯಸಭಾ ಚುನಾವಣೆ ಕುರಿತು ಮಾತ್ರ ಚರ್ಚೆ ಮಾಡಿದ್ದೇವೆ. ಅಧಿಕಾರ ಹಸ್ತಾಂತರ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಎಐಸಿಸಿ ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎನ್ನುವುದಂತೂ ಸ್ಪಷ್ಟವಾಗಿದೆ.

ಬೆಳಗ್ಗೆಯಿಂದ ದಿನವಿಡೀ ನಡೆದ ಸಭೆಯ ನಂತರ ಮಾಧ್ಯಮಗಳ ಎದುರು ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಮಾತುಕತೆ ನಡೆಸಿದ್ದೇವೆ. ಈ ಸಭೆಯಲ್ಲಿ ಪಕ್ಷದ ವರಿಷ್ಠರಾದ ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರೂ ಹಾಜರಿದ್ದರು. ಬೇರೆ ಯಾವುದೇ ವಿಷಯ ಕುರಿತು ಚರ್ಚೆ ನಡೆದಿಲ್ಲ ಎಂದು ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರು.

ಕೇವಲ ಮೂರು ನಿಮಿಷಗಳಲ್ಲಿ ಅವರು ಸುದ್ದಿಗೋಷ್ಠಿ ಮುಗಿಸಿದರು. ಇಂದಿರಾ ಭವನದಲ್ಲಿ ಇಂದು 11 ಗಂಟೆಯಿಂದ ಸತತ 6 ಗಂಟೆ ಸುದೀರ್ಘ ಚರ್ಚೆ ನಡೆದಿದೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಮಂತ್ರಿ ಡಿಕೆ ಶಿವಕುಮಾರ್‌ ಅವರೂ ಉಪಸ್ಥಿತರಿದ್ದರು. ಆದರೆ ಬಲ್ಲ ಮೂಲಗಳ ಪ್ರಕಾರ ಅಧಿಕಾರ ಹಸ್ತಾಂತರ ಕುರಿತು ಮಹತ್ವದ ಚರ್ಚೆ ನಡೆದಿದೆ. ಆದರೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರುವಲ್ಲಿ ಹೈಕಮಾಂಡ್‌ ವಿಫಲಗೊಂಡಿದೆ.

 

ಹೈಕಮಾಂಡ್‌ ವಿಫಲವಾಗಿದ್ದು ಏಕೆ?

ಈ ಹಿಂದೆ ಭರವಸೆ ನೀಡಿದ್ದಂತೆ ಎರಡೂವರೆ ವರ್ಷ ಮುಗಿದಾಗಲೇ ಅಧಿಕಾರ ಹಸ್ತಾಂತರ ಆಗಬೇಕಿತ್ತು. ಆರು ತಿಂಗಳು ತಡವಾಗಿದೆ. ಈಗಲೂ ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಹೇಗೆ ಎಂದು ಶಿವಕುಮಾರ್‌ ವರಿಷ್ಠರನ್ನು ಪ್ರಶ್ನಿಸಿದ್ದಾರೆ. ಒಂದು ಹಂತದಲ್ಲಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡ, ಡಿಸಿಎಂ ಪೋಸ್ಟ್‌ ಬೇಡ. ನನ್ನನ್ನು ನನ್ನ ಪಾಡಿಗೆ ಇರಲು ಬಿಟ್ಟುಬಿಡಿ ಎಂದು ಹೇಳಿದ್ದಾರೆ.

ಮತ್ತೊಂದು ಕಡೆ ಸಿದ್ದರಾಮಯ್ಯ ನನ್ನನ್ನು ಕೆಳಗಿಳಿಸುವುದಾದರೆ ದಲಿತ ಮುಖಂಡ ಗೃಹ ಸಚಿವ ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಇಲ್ಲವಾದಲ್ಲಿ ಪಕ್ಷ ಅಹಿಂದ ಮತಗಳನ್ನು ಕಳೆದುಕೊಳ್ಳಲಿದೆ. ಇದಕ್ಕೆ ನಾನು ಹೊಣೆ ಅಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಆದರೆ ಹೈಕಮಾಂಡ್‌ ಗೆ ಇಬ್ಬರೂ ಅನಿವಾರ್ಯವಾಗಿದ್ದಾರೆ. ಸಿದ್ದರಾಮಯ್ಯ ಅವರ ಮಾಸ್‌ ಇಮೇಜ್‌ ಮತ್ತು ಶಿವಕುಮಾರ್‌ ಅವರ ಸಂಘಟನಾ ಶಕ್ತಿ ಅನಿವಾರ್ಯವಾಗಿದೆ. ಹಾಗಾಗಿ ಯಾವುದೇ ನಿರ್ಧಾರಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ.

ಶಿವಕುಮಾರ್‌ ಅವರಿಗೆ ಅಧಿಕಾರ ನೀಡದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಒಕ್ಕಲಿಗ ಮತಗಳು ಕೈಕೊಡುವುದರಲ್ಲಿ ಸಂಶಯವಿಲ್ಲ. ಸಿದ್ದರಾಮಯ್ಯ ಅವರನ್ನು ಮುಂದುವರೆಸದಿದ್ದರೆ ಅಹಿಂದ ಮತಗಳು ಚದುರಿಹೋಗುವ ಭಯ ಕಾಡುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.