ನವದೆಹಲಿ : ವಿದ್ಯಾರ್ಥಿ ಹಾಗೂ ಯುವಜನರ ಹಕ್ಕುಗಳಿಗಾಗಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪಾಲ್ಗೊಂಡು ಪ್ರಧಾನಮಂತ್ರಿಗಳ ನಿವಾಸದ ಬಳಿ ನಡೆದ ಧರಣಿಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ದೆಹಲಿ ಪೊಲೀಸರು ತಮ್ಮನ್ನೂ ಹಾಗೂ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರನ್ನು ವಶಕ್ಕೆ ಪಡೆದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಇಲ್ಲಿಯವರೆಗೆ ಬರೋಬ್ಬರಿ 152 ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ಈ ಶೈಕ್ಷಣಿಕ ಅಕ್ರಮಗಳಿಗೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಉಗ್ರವಾಗಿ ಆಗ್ರಹಿಸಿದ್ದಾರೆ. ಯಾವುದೇ ಕಾರಣಕ್ಕೂ ಶಿಕ್ಷಣ ಮಂತ್ರಿ ರಾಜೀನಾಮೆ ನೀಡುವವರೆಗೆ ನಾವು ಹೋರಾಟ ಹಿಂಪಡೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ತಮ್ಮ ಬಂಧನ ಮತ್ತು ಬಿಡುಗಡೆಯ ನಂತರವೂ ತಮ್ಮ ಹೋರಾಟದ ನಿಲುವನ್ನು ಸ್ಪಷ್ಟಪಡಿಸಿದ ರಾಹುಲ್ ಗಾಂಧಿ, "ನಾವು ದೇಶದ ಸಮಸ್ತ ವಿದ್ಯಾರ್ಥಿಗಳ ಬೆಂಬಲಕ್ಕೆ ದೃಢವಾಗಿ ನಿಲ್ಲುತ್ತೇವೆ ಮತ್ತು ಈ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ" ಎಂದು ಘೋಷಿಸಿದ್ದಾರೆ. ಯುವಜನರ ಹಕ್ಕುಗಳ ರಕ್ಷಣೆಗಾಗಿ ಹಾಗೂ ವಿದ್ಯಾರ್ಥಿಗಳಿಗೆ ಸಂಪೂರ್ಣ ನ್ಯಾಯ ಸಿಗುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದು ರಾಗಾ ಪುನರುಚ್ಚರಿಸಿದ್ದಾರೆ.