ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಹೆತ್ತ ಮಗುವನ್ನು ಅಮ್ಮನ ಮಡಿಲಲ್ಲಿಟ್ಟು ಮುದ್ದಾಡಬೇಕಾದ ಕರುಳ ಕುಡಿ ಹುಟ್ಟಿದ ಎರಡೇ ದಿನಕ್ಕೆ ಅನಾಥವಾದ ಕರುಳು ಹಿಂಡುವ ಘಟನೆಯೊಂದು ವರದಿಯಾಗಿದೆ. "ಆಸ್ಪತ್ರೆ ವೆಚ್ಚಕ್ಕಾಗಿ ಹಣ ತೆಗೆದುಕೊಂಡು ಬರುತ್ತೇನೆ" ಎಂದು ಹೇಳಿ ಹೊರಟ ತಾಯಿಯೊಬ್ಬಳು, ಹೆತ್ತ ಮಗುವನ್ನು ಆಸ್ಪತ್ರೆಯಲ್ಲೇ ತೊರೆದು ಪರಾರಿಯಾಗಿದ್ದಾಳೆ.
ದೇವನಹಳ್ಳಿಯ ಖಾಸಗಿ ಆಸ್ಪತ್ರೆಯೊಂದರದಲ್ಲಿ ಕಳೆದ ಶುಕ್ರವಾರ (ಜು.24) ಹೆರಿಗೆಗೆ ಅಂತ ಬಂದಿದ್ದ ಯುವತಿಗೆ ಗಂಡು ಮಗು ಜನನವಾಗಿತ್ತು. ಮಗುವಿನ ತೂಕ ಕಡಿಮೆ ಹಾಗೂ ಉಸಿರಾಟದ ಸಮಸ್ಯೆಯಿದ್ದ ಹಿನ್ನೆಲೆ ದೇವಹಳ್ಳಿಯಿಂದ ಅಂಬ್ಯುಲೆನ್ಸ್ ಮೂಲಕ ತಾಯಿ ಹಾಗೂ ಕೇರ್ ಟೇಕರ್ ನರ್ಸ್ ಮೂಲಕ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ರು. ಆದರೆ ಚಿಕ್ಕಬಳ್ಳಾಪುರಕ್ಕೆ ಬಂದ ತಾಯಿ, ಮಗುವಿನ ಚಿಕಿತ್ಸೆಗೆ ಹಣ ತರ್ತೀನಿ ಅಂತ ಹೇಳಿ ಹೊರಟ್ಟಿದ್ದು, ಮರಳಿ ಬಂದಿಲ್ಲ. ಇತ್ತ ತಾಯಿ ಇಲ್ಲದೆ ಮಗು ಅನಾಥವಾಗಿದೆ.
ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಮಗುವಿನ ಆರೈಕೆಯಲ್ಲಿ ತೊಡಗಬೇಕಿದ್ದ ತಾಯಿ, ವೈಯಕ್ತಿಕ ಕಾರಣ ಹಾಗೂ ಹಣದ ನೆಪವೊಡ್ಡಿ ಹೊರಗೆ ಹೋಗಿದ್ದಾಳೆ. ಗಂಟೆಗಳು ಕಳೆದರೂ ಆಕೆ ಹಿಂತಿರುಗಿ ಬಾರದೇ ಇದ್ದಾಗ ಅನುಮಾನಗೊಂಡ ಆಸ್ಪತ್ರೆ ಸಿಬ್ಬಂದಿ ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದ್ದಾರೆ. ಆದರೆ ಆಕೆ ಮಗುವನ್ನು ಬಿಟ್ಟು ಎಸ್ಕೇಪ್ ಆಗಿರುವುದು ತಿಳಿದುಬಂದಿದೆ.
ತಾಯಿಯ ಹಾಲಿಗಾಗಿ ಅಳುತ್ತಿರುವ ಕೇವಲ ಎರಡು ದಿನದ ಹಸುಗೂಸಿನ ಸ್ಥಿತಿ ಕಂಡು ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಹೆತ್ತ ತಾಯಿಯೇ ಮಗುವನ್ನು ಹೀಗೆ ಬಿಟ್ಟು ಹೋಗಲು ಆಕೆಗೆ ಎದುರಾದ ಕಷ್ಟವೇನು ಅಥವಾ ಇದು ಯೋಜಿತ ಕೃತ್ಯವೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳು ಹಾಗೂ ಅನುಮಾನಗಳು ವ್ಯಕ್ತವಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಪ್ರಸ್ತುತ ಮಗುವಿಗೆ ಆಸ್ಪತ್ರೆಯಲ್ಲಿ ಅಗತ್ಯ ರಕ್ಷಣೆ ಹಾಗೂ ಆರೈಕೆ ನೀಡಲಾಗುತ್ತಿದ್ದು, ನಾಪತ್ತೆಯಾಗಿರುವ ತಾಯಿಯ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.