2026-07-31 02:22:43

HONEYMOON CASE | ಗಂಡನ ಕೊ*ಲೆ ಕೇಸ್‌ನಲ್ಲಿ ಜಾಮೀನು ರದ್ದು ಮತ್ತೆ ಕಂಬಿ ಎಣಿಸಲಿರುವ ಹನಿಮೂನ್ ಹಂತಕಿ ಸೋನಂ ರಘುವಂಶಿ | SNK

HONEYMOON CASE | ಗಂಡನ ಕೊ*ಲೆ ಕೇಸ್‌ನಲ್ಲಿ ಜಾಮೀನು ರದ್ದು ಮತ್ತೆ ಕಂಬಿ ಎಣಿಸಲಿರುವ ಹನಿಮೂನ್ ಹಂತಕಿ ಸೋನಂ ರಘುವಂಶಿ | SNK

ಶಿಲ್ಲಾಂಗ್: ಮೇಘಾಲಯದ ಪ್ರಸಿದ್ಧ ಹನಿಮೂನ್ ಕೊಲೆ ಪ್ರಕರಣದ ಮುಖ್ಯ ಆರೋಪಿಗಳಲ್ಲಿ ಒಬ್ಬಳಾದ ಸೋನಂ ರಘುವಂಶಿ  ಅಂತಿಮವಾಗಿ ಮಂಗಳವಾರ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗಿದ್ದಾಳೆ. ಸೋನಂಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿತ್ತು. ಅಷ್ಟೇ ಅಲ್ಲದೆ, ಮೂರು ವಾರಗಳ ಒಳಗಾಗಿ ಕೋರ್ಟ್‌ಗೆ ಶರಣಾಗುವಂತೆ ಗಡುವು ನೀಡಿತ್ತು. ಸರ್ವೋಚ್ಚ ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ಆಕೆ ಶರಣಾಗಿದ್ದು, ಸುಮಾರು ಮೂರು ತಿಂಗಳ ಕಾಲ ಜಾಮೀನಿನ ಮೇಲೆ ಹೊರಗಿದ್ದ ಸೋನಂ ಈಗ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾಳೆ. ಈ ವಿಷಯವನ್ನು ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಯಿಮ್ ಖಚಿತಪಡಿಸಿದ್ದು, ನ್ಯಾಯಾಲಯ ಆಕೆಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಠಿಣ ಶಿಕ್ಷೆಗೆ ರಾಜಾ ರಘುವಂಶಿ ಕುಟುಂಬದ ಮನವಿ ಈ ಬೆಳವಣಿಗೆಯನ್ನು ಮೃತ ರಾಜಾ ರಘುವಂಶಿಯ ಸೋದರ ವಿಪಿನ್ ರಘುವಂಶಿ ಸ್ವಾಗತಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಈ ಮಹತ್ವದ ತೀರ್ಪಿಗೆ ಧನ್ಯವಾದ ಅರ್ಪಿಸಿರುವ ಅವರು, ಮೇಘಾಲಯ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಆದಷ್ಟು ಬೇಗ ಪೂರ್ಣಗೊಂಡು, ನನ್ನ ಸಹೋದರನ ಕೊಲೆಗೆ ಕಾರಣರಾದ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಆಶಿಸಿದ್ದಾರೆ. ಕಳೆದ ಮೇ 2025 ರಲ್ಲಿ ಸೋಹ್ರಾಗೆ ಹನಿಮೂನ್ ಪ್ರವಾಸಕ್ಕೆ ಬಂದಿದ್ದ ರಾಜಾ ರಘುವಂಶಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಇಡೀ ಮೇಘಾಲಯವನ್ನೇ ನಡುಗಿಸಿದ್ದ ಈ ಹೈಪ್ರೊಫೈಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ 790 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಈ ಹತ್ಯೆಯ ಹಿಂದೆ ದೊಡ್ಡ ಸಂಚು ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಮೃತನ ಪತ್ನಿ ಸೋನಂ ರಘುವಂಶಿ, ಆಕೆಯ ಪ್ರೇಮಿ ಎನ್ನಲಾದ ರಾಜ್ ಕುಶ್ವಾಹಾ ಹಾಗೂ ಸುಪಾರಿ ಹಂತಕರಾದ ವಿಶಾಲ್ ಸಿಂಗ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ ಸೇರಿ ಒಟ್ಟು ಐದು ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ರಾಜಾ ಅವರನ್ನ ಹತ್ಯೆ ಮಾಡಲು ಇವರೆಲ್ಲರೂ ಒಟ್ಟಾಗಿ ಸ್ಕೆಚ್ ಹಾಕಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಏನಿದು ಪ್ರಕರಣ?

ಮೇ 21, 2025 ರಂದು ರಾಜಾ ಮತ್ತು ಸೋನಂ ದಂಪತಿ ಶಿಲ್ಲಾಂಗ್‌ಗೆ ಬಂದು ತಂಗಿದ್ದರು. ಆ ಬಳಿಕ ಅಲ್ಲಿಂದ ಸೋಹ್ರಾಗೆ ಪ್ರವಾಸ ಮುಂದುವರಿಸಿದ್ದರು. ಆದರೆ, ಮೇ 26 ರಂದು ಈ ದಂಪತಿ ದಿಢೀರನೆ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದ ತಕ್ಷಣ ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಕೊನೆಗೆ ಜೂನ್ 2 ರಂದು ಪ್ರಸಿದ್ಧ ವೇ ಸಾವ್ಡಾಂಗ್ ಜಲಪಾತದ ಸಮೀಪದ ಆಳವಾದ ಕಂದಕದಲ್ಲಿ ರಾಜಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತದನಂತರ ತನಿಖೆ ಚುರುಕುಗೊಳಿಸಿದ ಪೊಲೀಸರು ಹಂತಕರ ಜಾಲವನ್ನು ಭೇದಿಸಿ ಎಲ್ಲಾ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.