ಮೈಸೂರು: ಕಾಂತಾರ ಚಾಪ್ಟರ್-1 ಚಿತ್ರದ ದೈವಕ್ಕೆ ಅಪಮಾನ ಮಾಡಿದ ಆರೋಪದಡಿಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಕ್ಷಮೆಯಾಚಿಸಿದರು.
ರಾಜ್ಯ ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಅವರು ಇಂದು ಬೆಳಗ್ಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು ಎಂದು ತಿಳಿದು ಬಂದಿದೆ.
ಕಾಂತಾರ-1 ಚಿತ್ರದಲ್ಲಿ ದೈವಕ್ಕೆ ಅಪಮಾನ ಮಾಡಿದ ಪ್ರಕರಣದಲ್ಲಿ ರಣವೀರ್ ಸಿಂಗ್ ಅವರು ಬೇಷರತ್ ಕ್ಷಮೆಯಾಚಿಸಿದ ನಂತರ ಇವರ ವಿರುದ್ಧದ ವಿಚಾರಣೆಯನ್ನು ಹೈಕೋರ್ಟ್ ಕಳೆದ ತಿಂಗಳು ರದ್ದುಗೊಳಿಸಿತ್ತು. ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ರಣವೀರ್ ಸಿಂಗ್ ತಮ್ಮ ಎಕ್ಸ್ ಖಾತೆಯಲ್ಲಿ ಕ್ಷಮೆ ಕೇಳಿ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದರು.
ಏನಿದು ಪ್ರಕರಣ?
ಗೋವಾ ಚಲನಚಿತ್ರೋತ್ಸ ಸಮಾರಂಭದಲ್ಲಿ ಮಾತನಾಡಿದ ರಣವೀರ್ ಸಿಂಗ್, ನಟ ರಿಷಬ್ ಶೆಟ್ಟಿ ಅವರನ್ನು ಉದ್ದೇಶಿಸಿ ಅವರ ಕಾಂತಾರ ಚಿತ್ರವನ್ನು ನೋಡಿದೆ. ನಿಮ್ಮ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅದ್ಭುತವಾಗಿತ್ತು. ಆ ದೃಶ್ಯದಲ್ಲಿ ನಿಮ್ಮ ನಟನೆ ಹಾಗೂ ನಿಮ್ಮ ನೋಟ ಮಜವಾಗಿತ್ತು ಎಂದು ರಣವೀರ್ ಸಿಂಗ್ ಅನುಕರಣೆ ಮಾಡಿದ್ದರು. ಇವರ ಅನುಕರಣೆಗೆ ಆರಾಧಕರು ಆಕ್ರೋಶ ವ್ಯಕ್ತಪಡಿಸಿದ್ದರು.