ನವದೆಹಲಿ: ಎರಡು ರಾಜ್ಯಗಳ ನದಿ ನೀರು ಹಚಿಕೆಯ ಬಗ್ಗೆ ನರ್ಮದಾ ನದಿ ನೀರು ಹಂಚಿಕೆ ವಿಚಾರದಲ್ಲಿ ಅಂದು ಗುಜರಾತ್ ಮುಖ್ಯಮಂತ್ರಿಗಳಾಗಿದ್ದ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಡುವೆ ನಡೆದಿದ್ದ ಸೌಹಾರ್ದ ಚರ್ಚೆ ಅತ್ಯಂತ ಮಾದರಿ ಮತ್ತು ಅನುಕರಣೀಯ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದರು.
ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮ್ಮ ಒಡನಾಟ, ರಾಜಕೀಯ ಪ್ರಯಾಣದ ಬಗ್ಗೆ ರಚಿಸಿರುವ ʼಅಪನಾಪನ್ʼ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪುಸ್ತಕದಲ್ಲಿನ ಕೆಲ ಮಹತ್ವದ ಅಂಶಗಳನ್ನು ಉಲ್ಲೇಖಿಸಿದ ಮಾಜಿ ಪ್ರಧಾನಿಗಳು; 2006ರಲ್ಲಿ ನವದೆಹಲಿಯಲ್ಲಿ ಶಿವರಾಜ್ ಸಿಂಗ್ ಮತ್ತು ನರೇಂದ್ರ ಮೋದಿ ಅವರ ನಡುವೆ ಸರ್ದಾರ್ ಸರೋವರ ಯೋಜನೆ ಮತ್ತು ನರ್ಮದಾ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಸಭೆ ನಡೆಯಿತು. ಆಗ ಇಬ್ಬರೂ ಅವರವರ ರಾಜ್ಯಗಳ ಮುಖ್ಯಮಂತ್ರಿಗಳಾಗಿದ್ದರು. ಗುಜರಾತ್ ಮತ್ತು ಮಧ್ಯಪ್ರದೇಶ ಎರಡೂ ರಾಜ್ಯಗಳು ಒಟ್ಟಿಗೆ ಪ್ರಯೋಜನ ಪಡೆಯಬಹುದಾದ ಸಹಕಾರಿ ಚೌಕಟ್ಟನ್ನು ಮೋದಿ ಅವರು ರೂಪಿಸಿದ್ದರು. ಪರಸ್ಪರ ಸಹಕಾರ ತತ್ವದ ಚೌಕಟ್ಟಿನಲ್ಲಿ ನಡೆದ ಈ ಸಭೆ ಯಶಸ್ವಿಯಾಯಿತು. ಅದೊಂದು ಉತ್ತಮ ಸಭೆ. ಅಂತಾರಾಜ್ಯ ಜಲ ವಿವಾದಗಳ ಪರಿಹಾರದ ನಿಟ್ಟಿನಲ್ಲಿ ಅದು ಮಾದರಿ ಚರ್ಚೆ ಎಂದು ಬಣ್ಣಿಸಿದರು.
ನರ್ಮದಾ ನೀರಿನ ಹಂಚಿಕೆ ಮತ್ತು ಸರ್ದಾರ್ ಸರೋವರ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಬಗ್ಗೆ ಒಮ್ಮತ ಸಾಧಿಸಲು ಪ್ರಧಾನಿಯಾಗಿದ್ದಾಗ ತಾವು ನಡೆಸಿದ ಪ್ರಯತ್ನಗಳನ್ನು ನೆನಪು ಮಾಡಿಕೊಂಡ ದೇವೇಗೌಡರು; 1996ರಲ್ಲಿ ನಾನು ಸೌಹಾರ್ದಯುತ ಮತ್ತು ಒಮ್ಮತ-ಆಧರಿತ ಪರಿಹಾರಕ್ಕೆ ಬರಲು ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದಿದ್ದೆ. ನಂತರ ಸುಪ್ರೀಂ ಕೋರ್ಟ್ ಆ ಪರಿಹಾರ ಸೂತ್ರವನ್ನು ಅಂಗೀಕರಿಸಿತು. ನರ್ಮದಾ ನದಿ ನೀರು ಗುಜರಾತ್ ಮತ್ತು ಮಧ್ಯಪ್ರದೇಶದ ಜನರಿಗೆ ಪ್ರಯೋಜನವನ್ನು ನೀಡುತ್ತಲೇ ಇದೆ ಎಂಬುದು ನನಗೆ ಬಹಳ ಸಂತೋಷದ ಸಂಗತಿ ಎಂದರು.
ಹಾಗೆಯೇ ʼಅಪಾನಪಣ್ʼ ಪುಸ್ತಕದ ಶೀರ್ಷಿಕೆ ತಮಗೆ ಬಹಳ ಇಷ್ಟವಾಯಿತು ಎಂದು ಹೇಳಿದ ಅವರು; ಇದು ಇಬ್ಬರು ಸಹೋದ್ಯೋಗಿಗಳ ಜತೆಗಿನ ಆಳವಾದ ಬಾಂಧವ್ಯವನ್ನು ಬೆಳೆಸಿಕೊಳ್ಳುವ ಮತ್ತು ಅನುಭವಿಸುವ ಬಗ್ಗೆ ಮತ್ತು ಆತ್ಮೀಯತೆ, ರಕ್ತ ಸಂಬಂಧ ಮತ್ತು ಏಕತೆಯ ಭಾವನೆ ಬಗ್ಗೆ ಈ ಕೃತಿ ಹೇಳುತ್ತದೆ. ಕೃತಿಯ ಶೀರ್ಷಿಕೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಅವರು; ನನ್ನ ಮಾತೃಭಾಷೆ ಕನ್ನಡದ ಮೂಲಕ ಈ ಶೀರ್ಷಿಕೆ ಅರ್ಥವನ್ನು ಆಸ್ವಾದಿಸುವ ಪ್ರಯತ್ನ ಮಾಡಿದೆ. ನನ್ನ ಭಾಷೆಯಲ್ಲಿ ʼಅಪನಾಪನ್ʼ ಎಂದರೆ 'ಆಪ್ತ' ಅಥವಾ 'ಆಪ್ತಭಾವ' ಎಂದು ಅರ್ಥ ಬರುತ್ತದೆ. ಅದೊಂದು ಸುಂದರವಾದ ಪದ. ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದರೆ ನಿಮಗೆ ಈಗಲೇ ಶೀರ್ಷಿಕೆ ಸಿದ್ಧವಾಗಿದೆ ಎಂದರು.
ನರೇಂದ್ರ ಮೋದಿ ಅವರು ಬಹಳ ಪರಿಣಾಮಕಾರಿ ಆಡಳಿತಗಾರ ಮತ್ತು ಅನೇಕ ಉತ್ತಮ ವಿಚಾರಗಳನ್ನು ಹೊಂದಿರುವ ವ್ಯಕ್ತಿ. 2014ರಲ್ಲಿ ಮೋದಿ ಅವರು ಈ ರಾಷ್ಟ್ರದ ಆಡಳಿತ ವಹಿಸಿಕೊಂಡು ಅನೇಕ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಆಯಿತು. ಅತ್ಯಂತ ಉತ್ತಮವಾದ ಈ ಕೃತಿ ಆದಷ್ಟು ಬೇಗ ಕನ್ನಡವು ಸೇರಿದಂತೆ ಭಾರತದ ಎಲ್ಲಾ ಭಾಷೆಗಳಿಗೆ ಅನುವಾದ ಆಗಲಿ ಎಂದು ಅವರು ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹೇಳಿದರು.