ಬೆಂಗಳೂರು: ರಾಜ್ಯದ ನಾಲ್ಕು ರಾಜ್ಯಸಭಾ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಚುನಾವಣೆ ಎದುರಾಗಿದೆ. ಮೂರು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ನಿರೀಕ್ಷೆಯಿದ್ದು, ಒಂದು ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ಬಿಟ್ಟುಕೊಡಬೇಕು ಎಂದು ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹಪಡಿಸಿದೆ.
ಈ ಸಂಬಂಧ ಸಂಘಟನೆಯು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಆಗ್ರಹಪಡಿಸಿದೆ.
ಕರ್ನಾಟಕದ ಒಟ್ಟು 12 ರಾಜ್ಯಸಭಾ ಸದಸ್ಯರ ಪೈಕಿ ಒಬ್ಬರು ಮಾತ್ರ ಮುಸ್ಲಿಮರಿದ್ದಾರೆ. ಈ ಹಿಂದೆ ಮುಸ್ಲಿಮ್ ಸಮುದಾಯದ ಇಬ್ಬರು ಲೋಕಸಭಾ ಸದಸ್ಯರು ಇರುತ್ತಿದ್ದರು. ಆದರೆ ಸಮುದಾಯದ ಒಬ್ಬರೂ ಲೋಕಸಭಾ ಸದಸ್ಯರಿಲ್ಲ. ಕಾಂಗ್ರೆಸ್ ನಿಂದ ಮುಸ್ಲಿಮರಿಗೆ ಕೊಡುವ ಲೋಕಸಭಾ ಟಿಕೆಟ್ ಸಂಖ್ಯೆಯೇ ಒಂದಕ್ಕೆ ಇಳಿದಿದೆ. ರಾಜ್ಯಸಭಾ ಸದಸ್ಯರು ಒಬ್ಬರು ಮಾತ್ರ ಇದ್ದಾರೆ. ಸಂಸತ್ತಿನಲ್ಲಿ ರಾಜ್ಯದ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ತೀರಾ ಕುಸಿದು ಹೋಗಿದೆ ಎಂದು ಹೇಳಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವಲ್ಲಿ ಮುಸ್ಲಿಂ ಸಮುದಾಯ ನಿರ್ಣಾಯಕ ಪಾತ್ರ ವಹಿಸಿದೆ. ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ಹಾಕಿದೆ. ಬೇರೆ ಯಾವುದೇ ಸಮುದಾಯಕ್ಕೆ ಹೋಲಿಸಿದರೆ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ಮತ ಚಲಾಯಿಸಿ ಅದು ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಕೊಡುಗೆ ನೀಡಿದೆ.
ಆದರೆ ರಾಜ್ಯ ಸಚಿವ ಸಂಪುಟದಲ್ಲಿ, ಅಧಿಕಾರಶಾಹಿಯಲ್ಲಿ, ಸರಕಾರದ ಪ್ರಮುಖ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ನಿಗಮ ಮಂಡಳಿಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಅವರ ಜನಸಂಖ್ಯೆ ಹಾಗು ಅವರು ಕಾಂಗ್ರೆಸ್ ಗೆ ನೀಡಿರುವ ಬೆಂಬಲಕ್ಕೆ ಹೋಲಿಸಿದರೆ ತೀರಾ ಕಡಿಮೆಯಿದೆ. ಸಾಲದ್ದಕ್ಕೆ ಕಾಂಗ್ರೆಸ್ ಟಿಕೆಟ್ ಕೊಡುವ ಅತ್ಯುತ್ತಮ ಅವಕಾಶ ಇರುವಲ್ಲೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡುವುದಿಲ್ಲ ಎಂಬ ಸಂದೇಶ ಸಮುದಾಯಕ್ಕೆ ರವಾನೆಯಾಗಿದೆ.
ಹಾಗಾಗಿ ಈ ಬಾರಿ ರಾಜ್ಯ ಸಭಾ ಚುನಾವಣೆಯಲ್ಲಿ ಕನಿಷ್ಠ ಒಂದು ಸ್ಥಾನವನ್ನು ಪಕ್ಷದ ಓರ್ವ ಮುಸ್ಲಿಂ ಮುಖಂಡರಿಗೆ ಕೊಟ್ಟು ಕಾಂಗ್ರೆಸ್ ಈ ಕೊರತೆಯನ್ನು ತುಂಬಬೇಕಾಗಿದೆ. ಇತ್ತೀಚಿಗೆ ಕಾಂಗ್ರೆಸ್ ನಾಯಕ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಪ್ರತಿಪಾದಿಸಿರುವ ಆಶಯಗಳಿಗೂ ಇದು ಪೂರಕ ನಡೆಯಾಗಲಿದೆ. ಪಕ್ಷದ ಸಂಘಟನಾ ರಚನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಮತ್ತು ಭಾಗವಹಿಸುವಿಕೆ ಸಿಗುವಂತೆ ಅಲ್ಪಸಂಖ್ಯಾತ ಘಟಕ ಕಾರ್ಯನಿರ್ವಹಿಸಬೇಕು ಎಂದು ರಾಹುಲ್ ಗಾಂಧಿ ಅವರು ಸೂಚಿಸಿದ್ದಾರೆ ಎಂದು ವರದಿಯಾಗಿತ್ತು. ಹಾಗಾಗಿ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕದಲ್ಲಿ ಪಕ್ಷ ಕನಿಷ್ಠ ಒಂದು ಸ್ಥಾನವನ್ನು ಮುಸ್ಲಿಮರಿಗೆ ಕೊಟ್ಟು ಪಕ್ಷದ ಉನ್ನತ ನಾಯಕತ್ವ ಹಾಗು ಸಿದ್ಧಾಂತದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.