ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿ ವಿಭೂತಿಪುರ ಗ್ರಾಮದಲ್ಲಿ 2 ಎಕರೆ 12 ಗುಂಟೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಕಬಳಿಸಿರುವುದನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಜೈ ಭೀಮ್ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜೈ ಭೀಮ್ ಕರ್ನಾಟಕ ನೇತೃತ್ವದಲ್ಲಿ ದಲಿತ ಮತ್ತು ಜನಪರ ಸಂಘಟನೆಗಳ ನೂರಾರು ಮಂದಿ ಕಾರ್ಯಕರ್ತರು ಬೆಂಗಳೂರು ನಗರ ಜಿಲ್ಲಾಧಿಕಾರಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ತಪ್ಪಿಸಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ವಿಭೂತಿಪುರದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಜಮೀನು ಕಬಳಿಸಿರುವವರು ಪ್ರಭಾವಿಗಳಿದ್ದಾರೆ. ಕೂಡಲೇ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ ಜೈ ಭೀಮ್ ಕರ್ನಾಟಕ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ವೈಟ್ ಫಿಲ್ಡ್ ಅಣ್ಣಯ್ಯ ಮಾತನಾಡಿ, ವಿಭೂತಿಪುರ ಗ್ರಾಮದ 2 ಎಕರೆ 12 ಗುಂಟೆ ಸರ್ಕಾರಿ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಸರ್ಕಾರಿ ಭೂಮಿ ಕಬಳಿಸಿದ್ದಾರೆ. ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ದಾಖಲೆ ಸಹಿತ ದೂರು ಸಲ್ಲಿಸಲಾಗಿದೆ. ಕೂಡಲೇ ಕಬಳಿಸಿರುವ ಸರ್ಕಾರಿ ಭೂಮಿಯನ್ನು ಕೂಡಲೇ ವಾಪಾಸ್ ಪಡೆಯಬೇಕೆಂದು ಸಂಘಟನೆಯು ಒತ್ತಾಯಿಸುತ್ತದೆ ಎಂದರು.
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಪರವಾಗಿ ಪ್ರತಿಭಟನಾಕಾರರಿಂದ ತಹಸೀಲ್ದಾರ್ ಪ್ರಶಾಂತ್ ಪಾಟೀಲ್ ಮನವಿ ಸ್ವೀಕರಿಸಿದರು. ಈ ವೇಳೆ ಅವರು, ವಿಭೂತಿಪುರದಲ್ಲಿ ಸರ್ಕಾರಿ ಜಮೀನು ಕಬಳಿಸಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ದೃಢಪಟ್ಟರೆ ಭೂಮಿಯನ್ನು ವಾಪಸ್ ಪಡೆದು, ತಪ್ಪಿಸಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ವರನಟ ಡಾ ರಾಜ್ ಅಭಿಮಾನಿಗಳ ಆಟೋ ಸೇನೆಯ ರಾಜ್ಯಾಧ್ಯಕ್ಷ ಆಟೋ ಬಾಬು, ಎ. ಎಸ್.ಎಸ್. ರಾಜ್ಯ ಸಂಘಟನಾ ಕಾರ್ಯದರ್ಶಿ ವೈ.ಎಸ್.ಕೆ ಸಂತೋಷ್ ಸಮೇತನಹಳ್ಳಿ, ಜೈಭೀಮ್ ಸಂಘಟನೆಯ ಯುವ ಘಟಕದ ರಾಜ್ಯಾಧ್ಯಕ್ಷ ಕಾಡುಕೋಡಿ ಪ್ರಕಾಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶೀಗೆಹಳ್ಳಿ ರಮೇಶ್ ಗುಂಡಣ್ಣ,.ಕೆ. ಆರ್.ಪುರಂ ತಾಲ್ಲೂಕು ಅಧ್ಯಕ್ಷ ಎಸ್. ಶಂಕರ್, ಮಾನವ ಹಕ್ಕುಗಳ ಸಂಘಟನೆ ಜಿಲ್ಲಾಧ್ಯಕ್ಷೆ ಸೌಭಾಗ್ಯ, ಆಟೋ ರಾಜು, ಕೂಳಿಗನ ಕುಟುಂಬದ ಸದಸ್ಯರಾದ ಚಂದ್ರಪ್ಪ, ಎಸ್. ಶ್ರೀನಿವಾಸ್, ಆರ್. ರಾಜು, ಎಸ್.ಶಂಕರ್, ಶಾಂತರಾಜು, ಜೈರಾಮ್, ರೇಣುಕಾ ಸೇರಿದಂತೆ ನೂರಾರು ಮಂದಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.