2026-05-29 09:48:03

ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸಲು ಸಿದ್ಧ: ಈಶ್ವರ ಖಂಡ್ರೆ |Speed News Kannada

ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸಲು ಸಿದ್ಧ: ಈಶ್ವರ ಖಂಡ್ರೆ |Speed News Kannada

ಬೆಂಗಳೂರು: ತಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಪಕ್ಷ ನೀಡುವ ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದು ಮಾಜಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಈ ಹಿಂದೆ ಪೌರಾಡಳಿತ ಸಚಿವನಾಗಿ ಹಲವು ಸುಧಾರಣೆ ತಂದಿದ್ದು, ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಮತ್ತು ಬಿಜೆಪಿ ಆಡಳಿತ ಇದ್ದಾಗ 5 ವರ್ಷಗಳ ಕಾಲ ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದೇನೆ. ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂದರು.

ಎಲ್ಲರೂ ದೆಹಲಿಗೆ ಹೋಗಿದ್ದಾರೆ ನೀವು ಇಲ್ಲೇ ಇದ್ದೀರಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾಳೆ ಸಂಜೆ ಶಾಸಕಾಂಗ ಪಕ್ಷದ ಸಭೆ ಇದ್ದು, ಬೆಂಗಳೂರಿನಲ್ಲಿರುವಂತೆ ವರಿಷ್ಠರು ತಿಳಿಸಿದ್ದಾರೆ ಹೀಗಾಗಿ ತಾವು ಇಲ್ಲೇ ಇದ್ದು, ನಾಳೆ ಸಭೆಯ ಬಳಿಕ ಪಕ್ಷದ ವರಿಷ್ಠರನ್ನು ಭೇಟಿ ಮಾಡುವುದಾಗಿ ತಿಳಿಸಿದರು.

ಪಕ್ಷ ನಿಷ್ಠರು ಮತ್ತು ದಕ್ಷತೆಯಿಂದ ಕೆಲಸ ಮಾಡಿದವರನ್ನು ಕಾಂಗ್ರೆಸ್ ಪಕ್ಷ ಸದಾ ಗುರುತಿಸಿ, ಸ್ಥಾನಮಾನ ನೀಡಿದೆ. ನಾನು ಪ್ರಸ್ತುತ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷನೂ ಆಗಿದ್ದು, ತಮ್ಮ  ಸಮುದಾಯಕ್ಕೆ ಸೂಕ್ತ ಸ್ಥಾನ ಮಾನ ದೊರಕಬೇಕು. ಹೆಚ್ಚಿನ ಶಾಸಕರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಬೇಕು ಎಂಬುದು ತಮ್ಮ ಆಶಯ ಎಂದರು.

 ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಮಗೆ ದೊರಕಬಹುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಕಾಯ, ವಾಚ, ಮನಸಾ ಹಾಗೂ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನಿಮ್ಮ ಹೆಸರು ಉಪ ಮುಖ್ಯಮಂತ್ರಿ ಹುದ್ದೆಗೂ ಕೇಳಿ ಬರುತ್ತಿದೆ. ನೀವು ವರಿಷ್ಠರ ಮುಂದೆ ಈ ಬೇಡಿಕೆ ಇಟ್ಟಿದ್ದೀರಾ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರ ಖಂಡ್ರೆ, ವರಿಷ್ಠರು ಡಿಸಿಎಂ ಹುದ್ದೆ ಬಗ್ಗೆ ನಿರ್ಧರಿಸಿದ್ದಾರೋ ಇಲ್ಲವೋ ತಿಳಿದಿಲ್ಲ. ಆದರೆ ತಾವು ಕಳೆದ 3 ವರ್ಷಗಳ ಕಾಲ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವನಾಗಿ ಉತ್ತಮ ಕಾರ್ಯ ಮಾಡಿದ್ದೇನೆ, ಇಲಾಖೆಗೆ ಕಾಯಕಲ್ಪ ನೀಡಿದ್ದೇನೆ ಮತ್ತು ಈ ಹಿಂದೆ ಆಗದ ಹಲವು ಸುಧಾರಣೆ ತಂದ ತೃಪ್ತಿ ನನಗಿದೆ ಎಂದರು.

ಪಕ್ಷದ ವರಿಷ್ಠರು, ಸಮಾಜದ ವಿವಿಧ ಸ್ತರಗಳ ಜನರು ಅರಣ್ಯ ಸಚಿವನಾಗಿ ನಾನು ಮಾಡಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ತಮ್ಮ ಕಾರ್ಯಶೈಲಿ, ಪಕ್ಷ ನಿಷ್ಠೆ ಮತ್ತು ದಕ್ಷತೆ ಪ್ರಾಮಾಣಿಕತೆಗೆ ಉನ್ನತ ಸ್ಥಾನ ದೊರಕಲಿದೆ, ಪಕ್ಷ ಹೆಚ್ಚಿನ ಜವಾಬ್ದಾರಿ ನೀಡಲಿದೆ ಎಂಬ ವಿಶ್ವಾಸ ತಮಗಿದೆ ಎಂದರು.

ಸಂಘಟಿತ ಪ್ರಯತ್ನದಿಂದ ಪಕ್ಷಕ್ಕೆ ಬಲ:

ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆದದ್ದು ಅನ್ಯಾಯವಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ಸ್ವಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಜೊತೆಗೆ ರಾಜ್ಯ ರಾಜಕಾರಣದಲ್ಲೇ ಇದ್ದು ಪಕ್ಷ ಬೆಳೆಸುವುದಾಗಿ ತಿಳಿಸಿದ್ದಾರೆ.  ಕಳೆದ 3 ವರ್ಷಗಳಲ್ಲಿ ಅವರು ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿ ಉತ್ತಮವಾಗಿ ಸರ್ಕಾರ ಕೊಟ್ಟಿದ್ದಾರೆ. ಅವರ ಹೆಗಲಿಗೆ ಹೆಗಲು ಕೊಟ್ಟು ಡಿ.ಕೆ. ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಗಳಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಉಪ ಚುನಾವಣೆಗಳಲ್ಲಿ ಪಕ್ಷ ಜಯಭೇರಿ ಬಾರಿಸಿದೆ. ತಾವೂ ಕೂಡ ಉಪ ಚುನಾವಣೆಗಳಲ್ಲಿ ಪಕ್ಷದ ಪರ ಪ್ರಚಾರ ಮಾಡಿದ್ದೇನೆ ಎಂದ ಅವರು ಕಳೆದ ಸಚಿವ ಸಂಪುಟದಲ್ಲಿದ್ದ ಎಲ್ಲ ಸಚಿವರೂ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. ಎಲ್ಲರ ಸಂಘಟಿತ ಪ್ರಯತ್ನದಿಂದ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ ಎಂದರು.

ತಾವು ಅರಣ್ಯ ಮತ್ತು ಪರಿಸರ ಸಚಿವರಾಗಿ ಮಾಡಿರುವ ಸಾಧನೆಗಳ ಬಗ್ಗೆ ಹೇಳಿದ ಅವರು, 153 ಎಕರೆ ಪ್ರದೇಶದಲ್ಲಿ ಬೃಹತ್ ಉದ್ಯಾನವನ್ನು ವಿಶ್ವಗುರು ಬಸವಣ್ಣನವರ ಹೆಸರಲ್ಲಿ ಬೆಂಗಳೂರಿನಲ್ಲಿ ಅಭಿವೃದ್ಧಿ ಪಡಿಸಲು ಕ್ರಮ ವಹಿಸಲಾಗಿದೆ. 12 ಸಾವಿರ ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿದೆ. ಸುಮಾರು 15 ಸಾವಿರ ಎಕರೆ ಪ್ರದೇಶವನ್ನು ಹೊಸದಾಗಿ ಅರಣ್ಯ ಎಂದು ಘೋಷಿಸಲಾಗಿದೆ. ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಕಮಾಂಡ್ ಸೆಂಟರ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ  ಆಧಾರಿತ ಕ್ರಮ ವಹಿಸಲಾಗಿದೆ. ಚಾರಣ, ಮೃಗಾಲಯಗಳಿಗೆ ಸಂಬಂಧಿಸಿದಂತೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರಮಾಣಿತ ಕಾರ್ಯಾಚರಣೆ ಮಾನದಂಡ ರೂಪಿಸಲಾಗಿದೆ ಈ ಎಲ್ಲದರ ಬಗ್ಗೆ ತೃಪ್ತಿ ಇದೆ ಎಂದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.