ಮುಂಬೈ: ಮಹಾರಾಷ್ಟ್ರದ ಪುಣೆ ಸಮೀಪದ ಪಿಂಪ್ರಿ-ಚಿಂಚ್ವಾಡ್ ಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ 11 ಮಂದಿ ಮೃತಪಟ್ಟಿರುವ ದುರಂತ ಘಟನೆ ವರದಿಯಾಗಿದೆ. ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾನ್ವಾಡಿ ಪ್ರದೇಶದಲ್ಲಿ ಗುರುವಾರ ಕೆಲವರು ನಕಲಿ ಮದ್ಯ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರಲ್ಲಿ ಎಂಟು ಮಂದಿ ನಿನ್ನೆಯೇ ಅಸುನೀಗಿದ್ದರು. ಇಂದು ಬೆಳಗ್ಗೆ ಇನ್ನೂ ಮೂವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ನಕಲಿ ಮದ್ಯ ಸೇವಿಸಿದ ನಂತರ ಕೆಲವರು ಹಲವರಿಗೆ ಉಸಿರಾಟದ ತೊಂದರೆ ಅನುಭವಿಸಿದರೆ ಇನ್ನೂ ಕೆಲವರು ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಇವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ಪಿಂಪ್ರಿ-ಚಿಂಚ್ವಾಡ್ ಪ್ರದೇಶದಲ್ಲಿ ನಕಲಿ ಮದ್ಯ ಮಾರಾಟ ಜಾಲ ಸಕ್ರಿಯವಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಎನ್‌ಸಿಪಿ ನಾಯಕ ಯೋಗೇಶ್ ಬಹಾಲ್ ಪೊಲೀಸರು ಮತ್ತು ಅಧಿಕಾರಿಗಳ ಸಹಕಾರದಿಂದಲೇ ಅಕ್ರಮ ಮತ್ತು ಕಲಬೆರಕೆ ಮದ್ಯ ಮಾರಾಟ ಬಹಿರಂಗವಾಗಿ ನಡೆಯುತ್ತಿದೆ. ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ರವಾನಿಸಲಾಗಿದ್ದು, ಮರಣೋತ್ತರ ವರದಿ ಬಂದ ಬಳಿಕವೇ ನಿಖರ ಕಾರಣ ತಿಳಿಯಲಿದೆ.