2026-05-29 09:48:30

ಸಾಹಿತ್ಯದ ಜೊತೆ ಕನ್ನಡಪರ ಹೋರಾಟಕ್ಕೂ ಅ.ನ.ಕೃ ಕೊಡುಗೆ ಇದೆ: ಡಾ. ಬೈರಮಂಗಲ ರಾಮೇಗೌಡ|Speed News Kannada

ಸಾಹಿತ್ಯದ ಜೊತೆ ಕನ್ನಡಪರ ಹೋರಾಟಕ್ಕೂ ಅ.ನ.ಕೃ ಕೊಡುಗೆ ಇದೆ: ಡಾ. ಬೈರಮಂಗಲ ರಾಮೇಗೌಡ|Speed News Kannada

ಬೆಂಗಳೂರು: ಅ.ನ.ಕೃ ಕೇವಲ ಕಾದಂಬರಿಕಾರರಾಗಿ ಮಾತ್ರವಲ್ಲ ಕನ್ನಡದ ಉಳಿವಿಗಾಗಿ ಹೋರಾಟ ನಡೆಸಿ, ಚಳುವಳಿಗಳನ್ನು ಹುಟ್ಟುಹಾಕಿದ ರೋಚಕ ಅಧ್ಯಾಯಗಳಿಗೆ ಕಾರಣೀಭೂತರಾದವರು ಎಂದು ಹಿರಿಯ ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಹೇಳಿದ್ದಾರೆ.

ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ, ಜಯನಗರದ ಭಾರತ್ ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ, ಆಯೋಜಿಸಿದ್ದ, ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಡಿಯಲ್ಲಿ ಅ.ನ.ಕೃ ಅವರ ಸಂಧ್ಯಾರಾಗ ಕೃತಿ ಕುರಿತು ಮಾತನಾಡುತಿದ್ದರು. ಕನ್ನಡ ನೆಲ-ಜಲ-ಭಾಷೆಗಳ ಉಳಿವಿಗಾಗಿ ಅ.ನ.ಕೃ ಅವರು ಮ. ರಾಮಮೂರ್ತಿ ಅವರ ಜೊತೆಯಲ್ಲಿ ಸೇರಿ ನಡೆಸಿದ ಹೋರಾಟಗಳು ಕನ್ನಡ ಸಾಂಸ್ಕೃತಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ಅಧ್ಯಾಯವಾಗಿದೆ. ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಕನ್ನಡದ ನೆಲದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಅವರು ನಡೆಸಿದ ಚಳುವಳಿಗಳ ಕಥೆ ರೋಚಕವಾದದ್ದು. ಅವರು ಕೇವಲ ಬರಹಗಾರರಾಗಿ ಮಾತ್ರವಲ್ಲ ಕನ್ನಡಪರ ಹೋರಾಟಗಾರರಾಗಿಯೂ ಮಹತ್ವ ಪಡೆದುಕೊಂಡಿದ್ದಾರೆ ಎಂದು ಬೈರಮಂಗಲ ರಾಮೇಗೌಡ ಹೇಳಿದರು.

ಅ.ನ.ಕೃಷ್ಣರಾಯರ ಸಂಧ್ಯಾರಾಗ ಕಾದಂಬರಿಯು ಪ್ರಟಕವಾಗಿ 91ವರ್ಷಗಳು ಪೂರ್ಣಗೊಂಡಿದ್ದರೂ, ಇಂದಿಗೂ ಸಹ ಅದು ಜನಮನ್ನಣೆ ಉಳಿಸಿಕೊಂಡಿದೆ ಎಂದರೆ ಆ ಕಾದಂಬರಿಯ ಶ್ರೇಷ್ಠತೆಯನ್ನ ನಾವು ಗುರುತಿಸಬಹುದಾಗಿದೆ. ಇದು ಅ.ನ.ಕೃ ಅವರ ಸಾರ್ವಕಾಲಿಕ ಶ್ರೇಷ್ಠ ಕೃತಿ ಎಂದು ಡಾ. ಬೈರಮಂಗಲ ರಾಮೇಗೌಡ ಹೇಳಿದ್ದಾರೆ. 

ಸಂಧ್ಯಾರಾಗ ಒಂದು ಸಂಗೀತಗಾರನ ಕಥೆಯಾಗಿದ್ದರೂ ಅವನ ಮೂಲಕ ಬದುಕಿನ ವಿವಿಧ ಮಜಲುಗಳನ್ನು ಸ್ಪರ್ಶಿಸಿ ಆ ಕಾಲಘಟ್ಟದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಸಮರ್ಥ ಚಿತ್ರಣ ಕಟ್ಟಿಕೊಟ್ಟಿದೆ ಎಂದು ಅವರು ಹೇಳಿದರು. ಸಂಗೀತ ಬದುಕಿನ ಭಾಗ ಅದು ಜೀವನ ಪ್ರೀತಿಯನ್ನ ಉದ್ದೀಪನಗೊಳಿಸುತ್ತದೆ. ಅದರ ಮೂಲಕವೇ ಕಾದಂಬರಿಯ ಕಲಾವಿದ ಬದುಕಿನ ಎಲ್ಲ ಸವಾಲುಗಳನ್ನು ಎದುರಿಸುವ ರೀತಿಯನ್ನು ಅ.ನ.ಕೃ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಬದುಕಿನ ಎಲ್ಲ ಅನುಭವಗಳನ್ನು ಒಬ್ಬ ಮನುಷ್ಯ ತಾನಾಗಿಯೇ ಪಡೆಯಲು ಸಾಧ್ಯವಿಲ್ಲ. ಆದರೆ ಸಾಹಿತ್ಯ ತನ್ನ ಮೂಲಕ ಆ ಅನುಭವಗಳನ್ನು ಕಟ್ಟಿಕೊಡುತ್ತದೆ. ಓದುಗ ಆ ಕೃತಿಯನ್ನ ಓದಿ ಅನುಭೂತಿಯ ಮೂಲಕ ಆ ಅನುಭವವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಮಾತನಾಡಿ ಸಂಧ್ಯಾರಾಗ ಕೃತಿ ಅತ್ಯಂತ ಜನಮನ್ನಣೆ ಗಳಿಸಿದರ ಜೊತೆಗೆ ಚಲನಚಿತ್ರವಾಗಿಯೂ ಅಪಾರ ಜನಪ್ರಿಯತೆ ಪಡೆಯಿತು. ಇಂತಹ ಸಾಹಿತ್ಯ ಕೃತಿಗಳು ಸದಾ ಕಾಲವೂ ಸಮಾಜಕ್ಕೆ ಸ್ಫೂರ್ತಿ ತುಂಬುತ್ತದೆ ಎಂದರು. ಯಾವುದೇ ಒಂದು ಸಾಹಿತ್ಯ ಕೃತಿ ಬದುಕಿನ ಕಲೆಯನ್ನು ಕಳುಹಿಸಿಕೊಡುತ್ತದೆ. ಉತ್ತಮ, ಸಶಕ್ತ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಅದು ಸಾಹಿತ್ಯದ ಓದಿನಿಂದ ಮಾತ್ರ ಸಾಧ್ಯ. ಹಾಗಾಗಿಯೇ ಅಕ್ಕಮಹಾದೇವಿಯ ವಚನಗಳು ಇಂದಿಗೂ ಬದುಕನ್ನು ಎದುರಿಸುವ ಧೈರ್ಯ ಮತ್ತು ಚೈತನ್ಯ ಒದಗಿಸುತ್ತದೆ ಎಂದು ತಿಳಿಸಿದರು. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಸಂಪಾದನೆಯ ಒಂದು ಭಾಗವನ್ನು ಪುಸ್ತಕ ಕೊಂಡುಕೊಳ್ಳಲು ಉಪಯೋಗಿಸಿ ಎಂದು ಹೇಳುವುದರ ಮೂಲಕ ಜ್ಞಾನಾರ್ಜನೆ ಮತ್ತು ವಿದ್ಯಾಭ್ಯಾಸದ ಮಹತ್ವವನ್ನು ತಿಳಿಸಿದರು. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಡಾ. ಮಾನಸ ಕಿವಿಮಾತು ಹೇಳಿದರು.

ಭಾರತ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪ್ರೊ. ಎನ್.ಎಸ್. ವಿಜಯ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಕೆ.ಆರ್.ನಿರ್ಮಲ ಕುಮಾರ್, ಉಪಾಧ್ಯಕ್ಷರಾದ ಶಿವಲಿಂಗೇಗೌಡ  ಉಪಸ್ಥಿತರಿದ್ದರು. ಆರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಸ್ವಾಗತಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.