2026-05-29 09:45:45

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ; ಎನ್‌ಟಿಎ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌ |Speed News Kannada

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ; ಎನ್‌ಟಿಎ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌ |Speed News Kannada

ನವದೆಹಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (ಎನ್‌ಟಿಎ) ತೀವ್ರವಾಗಿ ಸುಪ್ರೀಂ ಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಎನ್‌ಟಿಎ ಸಂಸ್ಥೆಯನ್ನು ಪುನಾರಚಿಸಬೇಕು ಇಲ್ಲವೇ ಸ್ವಾಯತ್ತ ಸಂಸ್ಥೆಯನ್ನು ನೇಮಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠ ಇಂದು ನಡೆಸಿತು.

ವಿಚಾರಣೆ ವೇಳೆ ಪರೀಕ್ಷಾ ಅಕ್ರಮಗಳ ಕುರಿತು ಪ್ರಸ್ತಾಪಿಸಿದ ನ್ಯಾಯಪೀಠ, ಇಂತಹ ಘಟನೆಗಳು ಸಂಭವಿಸಿದಾಗ ಅದು ಕೇವಲ ವಿದ್ಯಾರ್ಥಿಗಳ ಮೇಲಷ್ಟೇ ಅಲ್ಲ, ಅವರ ಇಡೀ ಕುಟುಂಬದ ಮೇಲೆಯೂ ತೀವ್ರ ಮಾನಸಿಕ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಪರೀಕ್ಷೆಗಾಗಿ ಮಾನಸಿಕವಾಗಿಯೂ ಒತ್ತಡದಲ್ಲಿರುತ್ತಾರೆ. ಜತೆಗೆ ಸಮಯವನ್ನು ಮೀಸಲಿಟ್ಟಿರುತ್ತಾರೆ. ನಾವು ಯಾವುದೇ ಕಾರಣಕ್ಕೂ ದೇಶದ ಯುವ ಸಮೂಹವನ್ನು ನಿರಾಶೆಗೊಳಿಸಬಾರದು ಎಂದು ನ್ಯಾಯಮೂರ್ತಿಗಳು ಆತಂಕ ವ್ಯಕ್ತಪಡಿಸಿದರು.

ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಎಂದಿಗೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಎನ್‌ಟಿಎ ಸಂಸ್ಥೆಯು ಅವರನ್ನು ನೋಡಿ ಕಲಿಯಬೇಕು. ಇಂತಹ ಗಂಭೀರ ಲೋಪಗಳಿಗೆ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆ ಅತ್ಯಗತ್ಯ ಎಂದು ಪ್ರತಿಪಾದಿಸಿತು.

ಮೇ 3 ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವ್ಯಾಪಕ ಆರೋಪಗಳ ಹಿನ್ನೆಲೆಯಲ್ಲಿ, ಮೇ 12 ರಂದು ಎನ್‌ಟಿಎ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಪ್ರಸ್ತುತ ಈ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಜೂನ್ 21 ರಂದು ಮರುಪರೀಕ್ಷೆ ನಿಗದಿಯಾಗಿದೆ.

ಇಡೀ ಪ್ರಕರಣದ ಕುರಿತು ಸಮಗ್ರ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯನ್ನು ಜುಲೈ ಎರಡನೇ ವಾರಕ್ಕೆ ಮುಂದೂಡಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.