ಬೆಂಗಳೂರು: ಕಾವೇರಿ 2ನೇ ಹಂತದ 600 ಮಿ.ಮೀ. ವ್ಯಾಸದ ಮುಖ್ಯ ಕುಡಿಯುವ ನೀರಿನ ಕೊಳವೆಯಲ್ಲಿ ಉಂಟಾಗಿರುವ ಭಾರೀ ಸೋರಿಕೆಯನ್ನು ತಡೆಗಟ್ಟಲು ಬೆಂಗಳೂರು ಜಲಮಂಡಳಿಯು (BWSSB) ತುರ್ತು ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ಮುಗಿಯುವವರೆಗೆ (8 ಗಂಟೆಗಳ ಕಾಲ) ಮೈಸೂರು ರಸ್ತೆ ಸೇವಾ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸೌತ್ ಎಂಡ್ ವೃತ್ತದ (South end circle) ಮುಖಾಂತರ ಮೈಸೂರು ರಸ್ತೆ ಸೇವಾ ಪ್ರದೇಶಗಳಿಗೆ ಪ್ರತಿನಿತ್ಯ 14 MLD ನೀರು ಸರಬರಾಜು ಮಾಡುವ ಪೈಪ್‌ಲೈನ್ ರಸ್ತೆಯ (ಹನುಮಂತನಗರ ಪೊಲೀಸ್ ಕ್ವಾರ್ಟರ್ಸ್ ಎದುರು) ಮುಖ್ಯ ಕೊಳವೆಯಲ್ಲಿ ರಂಧ್ರ ಉಂಟಾಗಿ, ಹೆಚ್ಚಿನ ಒತ್ತಡದಲ್ಲಿ ನೀರು ಚಿಮ್ಮುತ್ತಿದೆ. ಇದರಿಂದ ಅಪಾರ ಪ್ರಮಾಣದ ಶುದ್ಧ ಕುಡಿಯುವ ನೀರು ಪೋಲಾಗುವುದರ ಜೊತೆಗೆ, ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೂ ತೀವ್ರ ತೊಂದರೆಯಾಗುತ್ತಿದೆ.
ಸಾರ್ವಜನಿಕ ಹಿತದೃಷ್ಟಿ ಹಾಗೂ ಅಮೂಲ್ಯವಾದ ನೀರಿನ ಸದ್ಬಳಕೆಯ ಉದ್ದೇಶದಿಂದ ಸೌತ್ ಎಂಡ್ ರಸ್ತೆಯ ಸುರಾನ ಕಾಲೇಜು ಬಳಿ ಇರುವ 24 ಅಂಗುಲದ ಕವಾಟವನ್ನು (Valve) 8 ಗಂಟೆಗಳ ಕಾಲ ಬಂದ್ ಮಾಡಿ (Local Shutdown) ಸಮರೋಪಾದಿಯಲ್ಲಿ ಸೋರಿಕೆ ತಡೆಗಟ್ಟುವ ದುರಸ್ತಿ ಕಾಮಗಾರಿಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ನೀರು ಸರಬರಾಜು ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು: ಈ 8 ಗಂಟೆಗಳ ಕಾಲಾವಧಿಯಲ್ಲಿ ಮೈಸೂರು ರಸ್ತೆ ಸೇವಾಣೆಯ ವ್ಯಾಪ್ತಿಗೆ ಬರುವ ಈ ಕೆಳಕಂಡ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ:
* ಕಸ್ತೂರಬಾ ನಗರ
* ಬಾಪೂಜಿನಗರ
* ಶಾಮಣ್ಣ ಗಾರ್ಡನ್
* ಮಂಜುನಾಥನಗರ*
* ಹೊಸಗುಡ್ಡದಹಳ್ಳಿ
* ಹಳೇಗುಡ್ಡದಹಳ್ಳಿ
* ಅರಾಫತ್ ನಗರ
ಈ ತುರ್ತು ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ಆಗುವ ಅನಾನುಕೂಲತೆಗಾಗಿ ಜಲಮಂಡಳಿಯು ವಿಷಾದಿಸುತ್ತದೆ. ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಈ ಎಲ್ಲಾ ಪ್ರದೇಶಗಳಿಗೆ ಎಂದಿನಂತೆ ಸುಗಮವಾಗಿ ನೀರು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಹಾಗೂ ಗ್ರಾಹಕರು ಮಂಡಳಿಯೊಂದಿಗೆ ಸಹಕರಿಸಬೇಕೆಂದು ಕೋರಿದ್ದಾರೆ.