ಬೆಂಗಳೂರು: ಅಪಘಾತ ಆದ ನಂತರವೂ ಗಾಯಗೊಂಡವರನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ತೋರಿದ ಕಾರಣಕ್ಕಾಗಿ ಆರೋಪಿಗೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಹೈಕೋರ್ಟ್ ಒಂದೇ ದಿನಕ್ಕೆ ಇಳಿಸಿ ಹೈಕೋರ್ಟ್ ಮಾನೀಯತೆ ಮೆರೆದಿದೆ. ನಿಜಕ್ಕೂ ಇದೊಂದು ಅಪರೂಪದ ಪ್ರಕರಣವಾಗಿದೆ.
ಆದರೂ ದಂಡದ ಮೊತ್ತವನ್ನು 5,000 ರೂ.ಗಳಿಂದ 1 ಲಕ್ಷ ರೂ.ಗಳಿಗೆ ಹೆಚ್ಚಿಸಿ ಅರ್ಧ ಭಾಗವನ್ನು ಮೃತರ ಕುಟುಂಬಕ್ಕೆ ನೀಡಬೇಕು ಎಂದು ಸೂಚಿಸಿದೆ. ಶಿಕ್ಷೆಯನ್ನು ಕಡಿಮೆ ಮಾಡುವಾಗ, ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಯಿಂದ ಅವಲಂಬಿತರು ಪಡೆದ ಪರಿಹಾರದ ಜೊತೆಗೆ ಹೆಚ್ಚಿದ ದಂಡದ ಮೊತ್ತವನ್ನು ಪಾವತಿಸಲು ಆರೋಪಿಯ ಇಚ್ಛೆಯನ್ನು ನ್ಯಾಯಾಲಯ ಪರಿಗಣಿಸಿದೆ
ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಈ ಆದೇಶ ಹೊರಡಿಸಿದ್ದಾರೆ.
2015ರಲ್ಲಿ ಮಂಗಳೂರಿನ ಪಕ್ಷಿಕೆರೆಯ ಚಾಲಕ ರಿಯಾಜ್ ಅಹ್ಮದ್ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವಾಗ ಆನಂದ್ ಶೆಟ್ಟಿ ಎಂಬುವರಿಗೆ ಡಿಕ್ಕಿ ಹೊಡೆದು ಅವರು ಮೃತಪಟ್ಟಿದ್ದರು. 2018 ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶಿಕ್ಷೆ ವಿಧಿಸಿ ಒಂದು ವರ್ಷದ ಸರಳ ಜೈಲು ಶಿಕ್ಷೆ ಮತ್ತು 5,000 ರೂ. ದಂಡವನ್ನು ಪಾವತಿಸಬೇಕಾಗಿತ್ತು.
ಆರೋಪಿ ಪರ ವಕೀಲರು ವಾದಿಸಿ ಅಪಘಾತದ ನಂತರ ಆರೋಪಿಯು ಸ್ಥಳದಿಂದ ಓಡಿಹೋಗಲಿಲ್ಲ, ಬದಲಿಗೆ ಗಾಯಾಳುಗಳನ್ನು ತನ್ನ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾನೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕಾಗಿ ಶಿಕ್ಷೆಯನ್ನು ರದ್ದುಗೊಳಿಸುವ ಮೂಲಕ ಮತ್ತು ದಂಡದ ಮೊತ್ತವನ್ನು ಹೆಚ್ಚಿಸುವ ಮೂಲಕ ನ್ಯಾಯಾಲಯ ದಯೆ ತೋರಿಸಬೇಕು ಮತ್ತು ಅದನ್ನು ಪರಿಹಾರವಾಗಿ ಪಾವತಿಸಬಹುದು ಎಂದು ಅವರು ವಾದಿಸಿದರು.
ಚಾಲಕ ಅಪಘಾತಕ್ಕೀಡಾದ ನಂತರ ಬಲಗಾಲಿಗೆ ರಾಡ್ ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಅವರು ಚಾಲಕ ಹುದ್ದೆಯನ್ನು ಕಳೆದುಕೊಂಡು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.
ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಅಪರಾಧಕ್ಕಾಗಿ ಮ್ಯಾಜಿಸ್ಟ್ರೇಟ್ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಮಾರ್ಪಡಿಸಿದೆ. ನ್ಯಾಯಾಲಯದ ಆದೇಶದವರೆಗೆ ಅರ್ಜಿದಾರರಿಗೆ ಒಂದು ದಿನದ ಜೈಲು ಶಿಕ್ಷೆ ವಿಧಿಸಲು ಸೂಚಿಸಿದೆ ಮತ್ತು ದಂಡದ ಮೊತ್ತವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ದಂಡದ ಮೊತ್ತದಲ್ಲಿ ಮೃತರ ಕುಟುಂಬಕ್ಕೆ ರೂ. 50,000 ಪಾವತಿಸಬೇಕು. ಇದರಿಂದ ನ್ಯಾಯ ಸಿಗಲಿದೆ ಎಂದು ಕೋರ್ಟ್ ಹೇಳಿದೆ.