2026-05-24 01:09:06

ಬಡತನಕ್ಕಿಂತ ಶ್ರೇಷ್ಠ ವಿಶ್ವವಿದ್ಯಾಲಯ ಮತ್ತೊಂದಿಲ್ಲ: ಪ್ರೊ.ಮೋಹನ್|Speed News Kannada

ಬಡತನಕ್ಕಿಂತ ಶ್ರೇಷ್ಠ ವಿಶ್ವವಿದ್ಯಾಲಯ ಮತ್ತೊಂದಿಲ್ಲ: ಪ್ರೊ.ಮೋಹನ್|Speed News Kannada

ತುಮಕೂರು: ಬಡತನಕ್ಕಿಂತ ಜಗತ್ತಿನಲ್ಲಿ ಶ್ರೇಷ್ಠ ವಿಶ್ವವಿದ್ಯಾಲಯ ಮತ್ತೊಂದಿಲ್ಲ ಎಂದು ತುಮಕೂರು ವಿಶ್ವವಿದ್ಯಾಲಯ ಮೌಲ್ಯಮಾಪನ ರಿಜಿಸ್ಟ್ರಾರ್ ಪ್ರೊ.ಹೆಚ್.ಎಸ್.ಮೋಹನ್ ಅಭಿಪ್ರಾಯಪಟ್ಟಿದ್ದಾರೆ.

ಶ್ರೀದೇವಿ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಶನಿವಾರ ಜಂಟಿಯಾಗಿ ಏರ್ಪಡಿಸಿದ್ದ ಶ್ರೀಸೃಷ್ಟಿ -2026 ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗತ್ತನ್ನು ಆಳಿದ ದೊರೆಗಳು, ಸಾಧಕರು, ಆದರ್ಶವಾದಿಗಳು ಬಡತನ ಹಿನ್ನಲೆಯಿಂದಲೇ ಬಂದವರು. ಹೀಗಾಗಿ ಬಡತನ ಕಲಿಸುವ ವಿದ್ಯೆಯನ್ನು, ಪಾಠವನ್ನು ಜಗತ್ತಿನ ಯಾವುದೇ ವಿಶ್ವವಿದ್ಯಾಲಯ ಕಲಿಸಲು ಸಾಧ್ಯವೇ ಇಲ್ಲ ಎಂದರು.

ನಿಮ್ಮ ಶಕ್ತಿ, ಸಾಮರ್ಥ್ಯದ ಮೇಲೆ ನಂಬಿಕೆ, ವಿಶ್ವಾಸವಿರಲಿ ಅದೇ ನಿಮ್ಮನ್ನು ಕಾಪಾಡುತ್ತದೆ. ಪದವಿ ಮುಗಿಸಿದ ನಂತರ ಯಾವುದೇ ಸರ್ಕಾರ, ಯಾವುದೇ ಕಂಪನಿ ಉದ್ಯೋಗ ಕೊಡುತ್ತೇವೆ ಎಂದು ರತ್ನ ಕಂಬಳಿ ಹಾಸಿ ಕರೆಯುವುದಿಲ್ಲ. ನಿಮ್ಮ ಆತ್ಮವಿಶ್ವಾಸವೇ ನಿಮ್ಮ ಭವಿಷ್ಯದ ಬಂಡವಾಳ ಬದುಕು ಸುಲಭವಿಲ್ಲ. ಆದರೆ ಛಲವಿದ್ದರೆ ಕೂಲಿ ಮಾಡದರೂ ಬದುಕಬಹುದು. ಹೀಗಾಗಿ ಛಲ ಬೆಳೆಸಿಕೊಳ್ಳಿ ಮತ್ತು ಸುಲಭವಾಗಿ ಯಾವುದೇ ಸೋಲನ್ನು ಒಪ್ಪಿಕೊಳ್ಳಬೇಡಿ ಎಂದರು.

ತುಮಕೂರು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಸಮನ್ವಾಯಾಧಿಕಾರಿ ಪ್ರೊ.ನಾಗಭೂಷಣ್ ಬಗ್ಗನಡು ಮಾತನಾಡಿ, ಗುಡಿ, ಗೋಪುರ, ಮಸೀದಿ ಮತ್ತು ಚರ್ಚ್ಗಳನ್ನು ಬಿಟ್ಟು ಹೊರಬನ್ನಿ ಎಂಬ ಕುವೆಂಪು ಅವರ ವಿಶ್ವಮಾನವ ಸಂದೇಶ ಮುನುಕುಲಕ್ಕೆ ದಾರಿ ದೀಪವಾಗಿದೆ ಎಂದರು.

 ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಘರ್ಷಣೆ-ಕ್ರಾಂತಿ ಇಲ್ಲದೆ ಸಮಾಜವನ್ನು ಹೇಗೆ ಸುಧಾರಿಸಬಹುದು. ಎಂಬುದಕ್ಕೆ ಕೇರಳದ ಸಮಾಜ ಸುಧಾರಕ ನಾರಾಯಣಗುರು ಬದುಕಿನ ಹಾದಿಯನ್ನು ವಿವರಿಸಿದರು. ವೈಫಲ್ಯ ಯಶಸ್ಸಿನ ಭಾಗ, ಯಶಸ್ಸು ಬಂದಾಗ ಅಹಂಕಾರ ಪಡಬೇಡಿ. ನೀವು ಬೆಳೆದಂತೆ ದೇಶದ ಪ್ರಗತಿಗೂ ಕೊಡುಗೆ ನೀಡಿ ಎಂದು ಹಿತವಚನ ಹೇಳಿದರು.

 ಮಾನವ ಸಂಪನ್ಮೂಲ ಸಂಸ್ಥೆಯ ನಿರ್ದೇಶಕ ಎಂ.ಎಸ್.ಪಾಟೀಲ್ ಮಾತನಾಡಿ, ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ತರಬೇತಿಯಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ಉದ್ಯೋಗ ಸಿಗುತ್ತಿದೆ. ಇದರಿಂದ ಕಾಲೇಜಿಗೆ ಒಳ್ಳೆಯ ಹೆಸರು, ಕೀರ್ತಿ ಬರುತ್ತಿದೆ ಎಂದರು.

 ವಿವಿಧ ಪಠ್ಯ ಮತ್ತು ಪಠ್ಯೇತರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್.ವಿ.ಶ್ರೀನಿವಾಸ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಅಜಯ್ ಮೊದಲಾದವರು ಭಾಗಿಯಾಗಿದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.