2026-05-24 01:13:15

ಅಸಮಾನತೆ ವಿರುದ್ಧ ಕಾಕ್ರೋಚ್‌ ಜನತಾ ಪಾರ್ಟಿ ಗಟ್ಟಿ ಶಕ್ತಿಯಾಗಿ ಹೊರಹೊಮ್ಮಲಿ: ಅಹಿಂಸಾ ಚೇತನ್‌|Speed News Kannada

 ಅಸಮಾನತೆ ವಿರುದ್ಧ ಕಾಕ್ರೋಚ್‌ ಜನತಾ ಪಾರ್ಟಿ ಗಟ್ಟಿ ಶಕ್ತಿಯಾಗಿ ಹೊರಹೊಮ್ಮಲಿ: ಅಹಿಂಸಾ ಚೇತನ್‌|Speed News Kannada

ಬೀದರ್‌: ದೇಶದಲ್ಲಿ ಬಹುದೊಡ್ಡ ಸಂಚಲನ ಮೂಡಿಸಿರುವ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಅಸಮಾನತೆ ವಿರುದ್ಧ ಗಟ್ಟಿ ಶಕ್ತಿಯಾಗಿ ಹೊರಹೊಮ್ಮಬೇಕು. ಆದರೆ,  ಸಿಜೆಪಿ ವರ್ಸಸ್‌ ಬಿಜೆಪಿ ಆಗಬಾರದು ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಅಹಿಂಸಾ ಚೇತನ್‌ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪಕ್ಷಕ್ಕೆ ನಾಲ್ಕೈದು ದಿನಗಳಲ್ಲಿ 20 ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ ಹೊರಹೊಮ್ಮಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯುವಕರ ದೊಡ್ಡ ಮಟ್ಟದ ಪಾಲ್ಗೊಳ್ಳುವಿಕೆ ಇದೆ ಎನ್ನುವುದು ಮತ್ತೆ ಸಾಬೀತಾಗಿದೆ. ಯುವಕರಲ್ಲಿ ದೊಡ್ಡ ಮಟ್ಟದ ರಾಜಕೀಯ ಪ್ರಜ್ಞೆ ಮೂಡಿದೆ. ಇಡೀ ವ್ಯವಸ್ಥೆಯ ಬಗ್ಗೆ ಯುವಜನತೆಗೆ ಹತಾಶೆ ಇರುವುದನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ನಮಗೆ ಪರಿವರ್ತನೆ ಬೇಕು. ಆದರೆ, ಸಿಜೆಪಿ ವರ್ಸಸ್‌ ಬಿಜೆಪಿ ಆಗಬಾರದು. ಇದು ಕಾಕ್ರೋಚ್‌ ನ್ಯಾಷನಲ್‌ ಕಾಂಗ್ರೆಸ್‌, ಕಾಕ್ರೋಚ್‌ ಜನತಾ ಪಾರ್ಟಿ ಆಗಬೇಕು. ಕಾಕ್ರೋಚ್‌ ಇಡೀ ಅಸಮಾನತೆ ವ್ಯವಸ್ಥೆಯ ವಿರುದ್ಧ ಗಟ್ಟಿ ಶಕ್ತಿಯಾಗಿ ಹೊಮ್ಮಿದರೆ ಕ್ಷೇಮ. ದಶಕಗಳಿಂದ ಹೋರಾಟ ನಡೆಸುತ್ತಿರುವ ಅನೇಕ ಹೋರಾಟಗಾರರು ನಿಜವಾದ ಕಾಕ್ರೋಚ್‌ಗಳು. ನಿಜವಾದ ಕಾಕ್ರೋಚ್‌ ಹೋರಾಟದ ಮನೋಭಾವದಿಂದ ಉತ್ತಮ ರಾಜ್ಯ, ಉತ್ತಮ ದೇಶ ಕಟ್ಟಬಹುದು. ಬುದ್ಧ, ಬಸವ, ಅಂಬೇಡ್ಕರ್‌, ಪೆರಿಯಾರ್‌ ಕಂಡ ಸಮ ಸಮಾಜ ನಿರ್ಮಿಸಬಹುದು ಎಂದು ಹೇಳಿದರು.

ಸಿಜೆಪಿ ಒಂದು ಉತ್ತಮ ಪ್ರಯತ್ನ. ಆದರೆ, ಆನ್‌ಲೈನ್‌ ಫಾಲೋವರ್ಸ್‌ಗಳಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜನರ ನಡುವೆ ಕೆಲಸ ಮಾಡಿದಾಗ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ. ಸಿಜೆಪಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಷೇಧಿಸುತ್ತಿರುವುದು ಸರಿಯಲ್ಲ. ಇದು ಪಾಕಿಸ್ತಾನದ ಕುಮ್ಮಕ್ಕಿನಿಂದ ಆಗುತ್ತಿದೆ ಎಂದು ಬಿಂಬಿಸುತ್ತಿರುವುದೂ ಸರಿಯಾದ ಕ್ರಮವಲ್ಲ. ಇದನ್ನು ಯಾರು ಕೂಡ ಹೀಯಾಳಿಸಬಾರದು ಎಂದರು.

ಖಂಡಿತವಾಗಿಯೂ ಬದಲಾವಣೆ ಆಗಬೇಕಿದೆ. ಈ ದೇಶದ ಅಲೆಮಾರಿಗಳು, ಬಡವರು, ರೈತರು, ಮಹಿಳೆಯರ ಸಮಸ್ಯೆಗಳು ಬಗೆಹರಿಯಬೇಕಿದೆ. ಹೋರಾಟಕ್ಕಿಂತ ರಾಜಕೀಯ ಅಧಿಕಾರವಿದ್ದರೆ ಸಮಸ್ಯೆಗಳು ಬಗೆಹರಿಯಬಹುದು. ಒಂದು ಸಿದ್ಧಾಂತದ ರೂಪದಲ್ಲಿ ಮುಂದುವರೆಸುವುದಾದರೆ ನನ್ನ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.