ವಾಷಿಂಗ್ಟನ್: ತಮ್ಮ ಮಗನ ಮದುವೆಗೆ ಹಾಜರಾಗಲು ಸಮಯಾವಕಾಶ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕ- ಇರಾನ್ ನಡುವೆ ಶಾಂತಿ ಮಾತುಕತೆಗಳಿಗೆ ನಡೆಯುತ್ತಿದ್ದು, ನಾನು ಶ್ವೇತಭವನದಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮದೇ ಒಡೆತನದ ʼಟ್ರುತ್ ಸೋಶಿಯಲ್ʼನಲ್ಲಿ ಟ್ರಂಪ್ ಬರೆದುಕೊಂಡಿದ್ದಾರೆ.
ನನ್ನ ಪುತ್ರ ಡಾನ್ ಜೂನಿಯರ್ ಮತ್ತು ಪಾಮ್ ಬೀಚ್‌ನ ಖ್ಯಾತ ಮಹಿಳೆ ಬೆಟಿನಾ ಆಂಡರ್ಸನ್ ಮದುವೆಯಲ್ಲಿ ಭಾಗವಹಿಸಲು ನನಗೆ ತುಂಬಾ ಆಸೆಯಿತ್ತು. ಆದರೆ ಸರ್ಕಾರದ ತುರ್ತು ಪರಿಸ್ಥಿತಿಗಳು ಮತ್ತು ದೇಶದ ಮೇಲಿನ ಜವಾಬ್ದಾರಿಯಿಂದಾಗಿ ನನಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ನಿರ್ಣಾಯಕ ಸಮಯದಲ್ಲಿ ನಾನು ಶ್ವೇತಭವನದಲ್ಲೇ ಇರುವುದು ದೇಶದ ದೃಷ್ಟಿಯಿಂದ ಮುಖ್ಯವಾಗಿದೆ. ನವದಂಪತಿಗಳಿಗೆ ನನ್ನ ಶುಭ ಹಾರೈಕೆಗಳು ಎಂದೂ ಟ್ರಂಪ್ ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ದಿಢೀರ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಟ್ರಂಪ್ ಅವರು ನ್ಯೂಜೆರ್ಸಿಯಲ್ಲಿರುವ ತಮ್ಮ ಗಾಲ್ಫ್ ರೆಸಾರ್ಟ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.