ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಆತ್ಮಹತ್ಯೆಗೆ ಪ್ರಯತ್ನ ನಡೆಸಿಲ್ಲ. ಇದು ಕೇವಲ ಊಹಾಪೋಹ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಅವರು ಇಂದು ಮಾಧ್ಯಮಗಳ ಜತೆ ಮಾತನಾಡುತ್ತಾ ಆ ರೀತಿಯ ಘಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿಲ್ಲ. ಆ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೆ. ಆ ರೀತಿ ಯಾವುದೇ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಟೌನ್‌ಹಾಲ್ ಮುಂಬಾಗದಲ್ಲಿ ಭಾನುವಾರ ನಡೆಯಬೇಕಿದ್ದ ಕಾಕ್ರೋಚ್ ಜನತಾ ಪಾರ್ಟಿ ಬಹಿರಂಗ ಸಭೆಗೆ ಪೊಲೀಸ್ ಅನುಮತಿ ನೀಡಿಲ್ಲ. ಅವರು ಯಾವ ಉದ್ದೇಶದಿಂದ ಸಭೆ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ಸಮಾವೇಶಕ್ಕೆ ಅನುಮತಿ ಕೊಡುವುದು ಬಿಡುವುದು ಪೊಲೀಸರಿಗೆ ಬಿಟ್ಟ ವಿಚಾರ. ಪೊಲೀಸರು ನಿರಾಕರಿಸಿದ್ದಾರೆ ಎಂದರೆ ಅದಕ್ಕೆ ಒಂದು ಕಾರಣ ಇರುತ್ತದೆ ಎಂದರು.
ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ ನಡೆದ ಕೋಮು ಗಲಭೆ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಇದಕ್ಕೆ ಬಿಜೆಪಿ, ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ವಿರೋಧ ಮಾಡುವುದು ಅವರಿಗೆ ಬಿಟ್ಟ ವಿಚಾರ. ಎಲ್ಲರನ್ನೂ ಸರಿಸಮಾನವಾಗಿ ನೋಡುವುದು ಸರ್ಕಾರದ ಕರ್ತವ್ಯ. ಕಾಂಗ್ರೆಸ್ ಅದನ್ನೇ ಮಾಡಿದೆ ಎಂದು ಸಮರ್ಥಿಸಿಕೊಂಡರು.
ಸಚಿವ ಸಂಪುಟ ಪುನರ್ ರಚನೆಗೆ ಶಾಸಕರ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿ, ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲ ಶಾಸಕರಿಗೂ ಸಾಮರ್ಥ್ಯ ಇದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಪರಮೇಶ್ವರ್ ತಿಳಿಸಿದರು.