ಬೆಂಗಳೂರು: ಪೆಟ್ರೋಲ್ ಬಂಕ್‌ನಲ್ಲಿ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಪಾದಿಸಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿದಾಗಲೆಲ್ಲಾ @INCKarnataka ಸರ್ಕಾರ ತಕ್ಷಣ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತದೆ "ಕೇಂದ್ರವೇ ಬೆಲೆ ಇಳಿಸಬೇಕು… ನಮ್ಮ ಕೈಯಲ್ಲಿ ಏನೂ ಇಲ್ಲ!" ಆದರೆ ಇದು ಅರ್ಧ ಸತ್ಯ. ಪ್ರತಿಯೊಬ್ಬ ಕನ್ನಡಿಗರು ತಿಳಿಯಲೇಬೇಕಾದ ಅಸಲಿ ಲೆಕ್ಕಾಚಾರದ ಅಂಕಿಅಂಶಗಳನ್ನು ಮುಂದಿಟ್ಟಿದ್ದಾರೆ.
ಕೇಂದ್ರ ಸರ್ಕಾರದ ತೆರಿಗೆ (Fixed Tax):
ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ನಿಗದಿತ ರೂಪಾಯಿ ಮೊತ್ತವನ್ನು ಅಬಕಾರಿ ಸುಂಕವಾಗಿ ವಿಧಿಸುತ್ತದೆ. ಪೆಟ್ರೋಲ್ ಬೆಲೆ ₹80 ಇರಲಿ, ₹108 ಆಗಲಿ, ಕೇಂದ್ರಕ್ಕೆ ಸಿಗುವ ತೆರಿಗೆ ಮೊತ್ತ ಬಹುತೇಕ ಒಂದೇ ಆಗಿರುತ್ತದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿದರೆ ಕೇಂದ್ರ ಸರ್ಕಾರಕ್ಕೆ ನಯಾ ಪೈಸೆ ಹೆಚ್ಚುವರಿ ತೆರಿಗೆ ಆದಾಯ ಸಿಗುವುದಿಲ್ಲ. ಬೆಲೆ ಏರಿಕೆಯಿಂದ ಕೇಂದ್ರದ ಖಜಾನೆ ತುಂಬುವುದಿಲ್ಲ.
ಕರ್ನಾಟಕ ಸರ್ಕಾರದ ತೆರಿಗೆ (Percentage VAT):
ಆದರೆ ಕರ್ನಾಟಕ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೇಕಡಾವಾರು VAT ವಸೂಲಿ ಮಾಡುತ್ತದೆ.
ಪೆಟ್ರೋಲ್ VAT - 29.84%; ಡೀಸೆಲ್ VAT - 18.4%
ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿದ ಕ್ಷಣದಿಂದಲೇ ಕರ್ನಾಟಕ ಸರ್ಕಾರದ ಆದಾಯ ತನ್ನಿಂದ ತಾನೇ ಹೆಚ್ಚಾಗುತ್ತದೆ! ಅಂದರೆ ಜನ ಸಾಮಾನ್ಯರಿಗೆ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾದಷ್ಟೂ, ರಾಜ್ಯ ಸರ್ಕಾರದ ಪಾಲು ಅಷ್ಟೇ ಹೆಚ್ಚಾಗುತ್ತದೆ.
ಸರಳ ಉದಾಹರಣೆ ನೋಡಿ:
ಒಂದು ವೇಳೆ ಪೆಟ್ರೋಲ್ ಮೂಲ ಬೆಲೆ ₹50 ಇದ್ದರೆ, ರಾಜ್ಯ ಸರ್ಕಾರಕ್ಕೆ ಸುಮಾರು ₹15 ತೆರಿಗೆ ಸಿಗುತ್ತದೆ. ಅದೇ ಬೆಲೆ ₹70ಕ್ಕೆ ಏರಿದರೆ, ರಾಜ್ಯ ಸರ್ಕಾರದ ಪಾಲು ತಾನಾಗಿಯೇ ₹21ಕ್ಕೆ ಏರುತ್ತದೆ! ಅಂದರೆ ರಾಜ್ಯ ಸರ್ಕಾರ ನೇರವಾಗಿ ಬೆಲೆ ಹೆಚ್ಚಿಸದಿದ್ದರೂ, ಶೇಕಡವಾರು VAT ಮೂಲಕ ಜನರ ಜೇಬಿನಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡುತ್ತಿದೆ.
ಒಟ್ಟಾರೆಯಾಗಿ ಅಸಲಿ ಸತ್ಯ ಏನೆಂದರೆ, ಜಾಗತಿಕ ತೈಲ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ತೆರಿಗೆ ಅಥವಾ ಆದಾಯ ಬರುವುದಿಲ್ಲ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ಜನರ ಸಂಕಷ್ಟವನ್ನೇ ಆದಾಯದ ಅವಕಾಶವನ್ನಾಗಿ ಮಾಡಿಕೊಂಡಿದೆ! ಮಧ್ಯಮ ವರ್ಗ, ರೈತರು, ಆಟೋ ಚಾಲಕರು, ಕ್ಯಾಬ್ ಡ್ರೈವರ್‌ಗಳು, ಡೆಲಿವರಿ ಬಾಯ್ಸ್, ಸಣ್ಣ ವ್ಯಾಪಾರಿಗಳು - ಎಲ್ಲರ ಮೇಲೂ ಬೆಲೆ ಏರಿಕೆಯ ಭಾರ ಬೀಳುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರದ ಖಜಾನೆ ಮಾತ್ರ ತುಂಬುತ್ತಿದೆ.
ಇಂತಹ ಸಂದರ್ಭದಲ್ಲಿ ಜನರಿಗೆ ಪರಿಹಾರ ನೀಡಬೇಕಾದ ಸರ್ಕಾರ, "ನಾನು ತೆರಿಗೆ ಇಳಿಸುವುದಿಲ್ಲ" ಎಂದು ಅಹಂಕಾರದಿಂದ ಹೇಳುತ್ತಿದೆ. ಜನರ ಕಣ್ಣೀರು ಕಾಂಗ್ರೆಸ್ ಸರ್ಕಾರಕ್ಕೆ ಆದಾಯದ ಮೂಲವಾಗಬಾರದು.
ಹಾಗಾಗಿ ನಮ್ಮ ಆಗ್ರಹ ಇಷ್ಟೇ:
ರಾಜ್ಯ ಸರ್ಕಾರ ತಕ್ಷಣವೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ VAT ತಕ್ಷಣ ಕಡಿತಗೊಳಿಸಬೇಕು. ಮಧ್ಯಮ ವರ್ಗ ಮತ್ತು ರೈತರಿಗೆ ಬೆಲೆ ಏರಿಕೆಯಿಂದ ಆಗುತ್ತಿರುವ ಹೊರೆ ಕಡಿಮೆ ಮಾಡಬೇಕು. ಜನರ ಸಂಕಷ್ಟದಿಂದ ಲಾಭ ಪಡೆಯುವುದನ್ನು ನಿಲ್ಲಿಸಬೇಕು. "ನಾವ್ಯಾಕೆ ಕಡಿಮೆ ಮಾಡಬೇಕು", ಅನ್ನುವ ದುರಹಂಕಾರ ಬಿಟ್ಟು, ಜನಸಾಮಾನ್ಯರ ಹಿತಾಸಕ್ತಿ ಕಾಪಾಡಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.