2026-07-17 02:19:01

Cabinet Expansion Temporarily Postponed | ಸಚಿವಾಕಾಂಕ್ಷಿಗಳಿಗೆ ನಿರಾಸೆ ಸಂಪುಟ ವಿಸ್ತರಣೆ ತಾತ್ಕಾಲಿಕ ಮುಂದೂಡಿಕೆ! | SNK

Cabinet Expansion Temporarily Postponed | ಸಚಿವಾಕಾಂಕ್ಷಿಗಳಿಗೆ ನಿರಾಸೆ ಸಂಪುಟ ವಿಸ್ತರಣೆ ತಾತ್ಕಾಲಿಕ ಮುಂದೂಡಿಕೆ! | SNK

ನವದೆಹಲಿ: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಸದ್ಯಕ್ಕೆ ತಣ್ಣಗಾದಂತೆ ಕಾಣುತ್ತಿದೆ. ಸಚಿವಾಕಾಂಕ್ಷಿಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಇಂದು ನಡೆದ ಸುದೀರ್ಘ ಚರ್ಚೆಯ ಹೊರತಾಗಿಯೂ ಅಂತಿಮ ತೀರ್ಮಾನ ಹೊರಬೀಳದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯ ಕುರಿತ ಸಭೆ ಮುಂದಿನ ವಾರಕ್ಕೆ ಮುಂದೂಡಲ್ಪಟ್ಟಿದೆ.

ಸೋನಿಯಾ ಗಾಂಧಿ ನಿವಾಸದಲ್ಲಿ ಚರ್ಚೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್​​, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಗಂಭೀರ ಚರ್ಚೆ ನಡೆಸಿದರು. ಸಂಪುಟ ಸೇರಲು ತುದಿಗಾಲಿನಲ್ಲಿ ನಿಂತಿರುವ ಶಾಸಕರ ಪಟ್ಟಿ ಹಾಗೂ ಜಟಾಪಟಿಗಳ ಕುರಿತು ನಾಯಕರು ಸುದೀರ್ಘ ಆಲೋಚನೆ ನಡೆಸಿದ್ದಾರಾದರೂ, ಸಭೆಯು ಯಾವುದೇ ತಾರ್ಕಿಕ ಅಂತ್ಯ ಕಾಣದೆ ಮುಕ್ತಾಯಗೊಂಡಿದೆ.

ಬೆಂಗಳೂರಿಗೆ ವಾಪಸ್ ಆದ ಖರ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತುರ್ತು ಕೆಲಸದ ನಿಮಿತ್ತ ದಿಢೀರನೆ ಬೆಂಗಳೂರಿಗೆ ವಾಪಸ್ ಆಗಿರುವುದು ಈ ವಿಳಂಬಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಹೈಕಮಾಂಡ್‌ನ ಪ್ರಮುಖ ನಾಯಕರಾದ ಖರ್ಗೆ ಅವರ ಅನುಪಸ್ಥಿತಿಯಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ ಎಂದು ನಾಯಕರು ಈ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ, ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ಮರಳಿದ ನಂತರವಷ್ಟೇ ಮುಂದಿನ ವಾರ ಮತ್ತೊಮ್ಮೆ ಹೈಕಮಾಂಡ್ ಸಭೆ ನಡೆಸಲು ನಿರ್ಧರಿಸಲಾಗಿದೆ.

ಇನ್ನೊಂದು ವಾರ ಕಾಯುವುದು ಅನಿವಾರ್ಯ!

ಈ ಹಠಾತ್ ಬೆಳವಣಿಗೆಯಿಂದಾಗಿ ಸಚಿವ ಸಂಪುಟ ಸೇರಲು ಕಸರತ್ತು ನಡೆಸುತ್ತಿದ್ದ ಸಚಿವಾಕಾಂಕ್ಷಿಗಳ ಆಸೆಗೆ ಸದ್ಯಕ್ಕೆ ತಣ್ಣೀರು ಬಿದ್ದಂತಾಗಿದೆ. ಹೈಕಮಾಂಡ್ ಸಭೆಯತ್ತ ಕಣ್ಣಿಟ್ಟು ದೆಹಲಿಯಲ್ಲೇ ಬೀಡುಬಿಟ್ಟಿದ್ದ ಅನೇಕ ಶಾಸಕರು ಈಗ ಕನಿಷ್ಠ ಇನ್ನೂ ಒಂದು ವಾರ ಕಾಲ ಕಾಯುವುದು ಅನಿವಾರ್ಯವಾಗಿದೆ. ಮುಂದಿನ ವಾರ ನಡೆಯಬಹುದು ಎನ್ನಲಾಗುತ್ತಿರುವ ಹೈಕಮಾಂಡ್ ಸಭೆಯಲ್ಲಾದರೂ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುವುದನ್ನು ಕಾದುನೋಡಬೇಕಿದೆ. ಇನ್ನು ಸಿಎಂ ಡಿಕೆಶಿ, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಮತ್ತೂ ದೆಹಲಿಯಲ್ಲಿ ಬೀಡು ಬಿಟ್ಟಿರುವ ಕೆಲ ಕೈನಾಯಕರು ಇಂದೇ ರಾಜ್ಯಕ್ಕೆ ಮರಳಲಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.