ಮೈಸೂರು: ಕೇಂದ್ರ ಸರ್ಕಾರವು ನೀಟ್ ಪರೀಕ್ಷಾ ಅಕ್ರಮ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದೆ. ಅಲ್ಲದೆ ಮರುಪರೀಕ್ಷೆ ನಡೆಸಿ ಫಲಿತಾಂಶವನ್ನೂ ಹೊರತಂದಿದೆ. ಆದರೂ ಕಾಂಗ್ರೆಸ್ ಪಕ್ಷವು ಇದೇ ವಿಷಯವನ್ನು ಇಟ್ಟುಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ, ಒಡೆಯರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆಯ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಉಂಟಾದ ರೀತಿಯಲ್ಲಿಯೇ ಭಾರತದಲ್ಲೂ ಸಾರ್ವಜನಿಕ ಅಶಾಂತಿ ಮತ್ತು ಅರಾಜಕತೆ ವಾತಾವರಣ ನಿರ್ಮಿಸಲು ಕಾಂಗ್ರೆಸ್ ಸತತ ಪ್ರಯತ್ನ ನಡೆಸುತ್ತಿದೆ. ಪ್ರತಿಭಟನೆ ಹಾಗೂ ಅಪಪ್ರಚಾರಗಳ ಮೂಲಕ ಜನರ ದಿಕ್ಕು ತಪ್ಪಿಸುವುದು ಕಾಂಗ್ರೆಸ್‌ನ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.
ಮುಂದುವರಿದು ಮಾತನಾಡಿದ ಅವರು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಗಟ್ಟಿಯಾಗಿದೆ. ಇಂತಹ ಅರಾಜಕತೆಯ ತಂತ್ರಗಳಿಗೆ ದೇಶದ ಜನತೆ ಎಂದಿಗೂ ಮಣಿಯುವುದಿಲ್ಲ. ಕಾಂಗ್ರೆಸ್ ನಡೆಸುತ್ತಿರುವ ಈ ರೀತಿಯ ರಾಜಕೀಯಕ್ಕೆ ಮುಂಬರುವ ದಿನಗಳಲ್ಲಿ ಜನರೇ ಸೂಕ್ತವಾಗಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಂಸದ ಯದುವೀರ್ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಮೈಸೂರಿನ ಎನ್‌ಆರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯ ಬಗ್ಗೆಯೂ ಸಂಸದರು ಅನುಮಾನ ವ್ಯಕ್ತಪಡಿಸಿದರು. ಕಳೆದ ಮೂರು ದಶಕಗಳಿಂದ ಹೊರರಾಜ್ಯಗಳ ಜನರನ್ನು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಸೂಕ್ತ ತನಿಖೆ ಹಾಗೂ ಪರಿಶೀಲನೆ ಅಗತ್ಯವಿದೆ ಎಂದು ಆಗ್ರಹಿಸಿದರು.