ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಮೈಲಸಂದ್ರ ದಿಣ್ಣೆಪಾಳ್ಯದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಕಾರಿನಲ್ಲಿ ಬಂದ ನಾಲ್ವರು ದುಷ್ಟಕರ್ಮಿಗಳು ಲಾಂಗು-ಮಚ್ಚುಗಳಿಂದ ಮನೆಯೊಂದರ ಮೇಲೆ ಏಕಾಏಕಿ ದಾಳಿ ನಡೆಸಿ, ವಿಧ್ವಂಸಕ ಕೃತ್ಯ ಎಸಗಿದ್ದಾರೆ. ಇಲ್ಲಿನ ನಿವಾಸಿ ವಿಶ್ವನಾಥ ರೆಡ್ಡಿ ಎಂಬುವವರ ಮನೆಯನ್ನು ಗುರಿಯಾಗಿಸಿಕೊಂಡು ಈ ಮಾರಕಾಸ್ತ್ರಗಳ ದಾಳಿ ನಡೆದಿದೆ.
ಪ್ರಾಣಭಯದಿಂದ ಓಡಿ ಬಾಗಿಲು ಹಾಕಿಕೊಂಡ ಕುಟುಂಬ!
ಊಟ ಮುಗಿಸಿ ಪತ್ನಿ ಮತ್ತು ಸೊಸೆಯೊಂದಿಗೆ ಮನೆಯ ಹೊರಗೆ ವಿಶ್ರಾಂತಿ ಪಡೆಯುತ್ತಿದ್ದ ವಿಶ್ವನಾಥ ರೆಡ್ಡಿ ಅವರತ್ತ ಕಾರಿನಲ್ಲಿ ಬಂದ ನಾಲ್ವರು ಲಾಂಗು ಮತ್ತು ಮಚ್ಚುಗಳನ್ನು ಬೀಸುತ್ತಾ ನುಗ್ಗಿದ್ದಾರೆ. ತಕ್ಷಣವೇ ಎಚ್ಚೆತ್ತ ಕುಟುಂಬಸ್ಥರು ಪ್ರಾಣಭಯದಿಂದ ಓಡಿ ಹೋಗಿ ಮನೆಯೊಳಗೆ ಬಾಗಿಲು ಹಾಕಿಕೊಂಡಿದ್ದಾರೆ. ಬಾಗಿಲು ತೆರೆಯಲು ಸಾಧ್ಯವಾಗದಿದ್ದಾಗ, ಪುಂಡರು ಲಾಂಗುಗಳಿಂದ ಬಾಗಿಲನ್ನು ಒಡೆದುಹಾಕಲು ಯತ್ನಿಸಿದ್ದಾರೆ. ಅದೂ ಸಾಧ್ಯವಾಗದಿದ್ದಾಗ ಮನೆಯ ಕಿಟಕಿ ಗಾಜುಗಳನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡಿದ್ದಾರೆ. ಜೊತೆಗೆ ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರು ಮತ್ತು ಬೈಕ್ ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ನಾಶಪಡಿಸಿದ್ದಾರೆ. ಅಕ್ಕಪಕ್ಕದ ಬಟ್ಟೆ ಅಂಗಡಿಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಅಂಗಡಿ ಮಾಲೀಕ ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನ ಮೇಲೆಯೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
'ಯಾರೊಂದಿಗೂ ದ್ವೇಷವಿರಲಿಲ್ಲ': ಆತಂಕದಲ್ಲಿ ಸ್ಥಳೀಯರು ಈ ದಿಢೀರ್ ದಾಳಿಯಿಂದ ದಿಣ್ಣೆಪಾಳ್ಯದ ನಿವಾಸಿಗಳಲ್ಲಿ ತೀವ್ರ ಆತಂಕ ಆವರಿಸಿದೆ. ಘಟನೆ ಕುರಿತು ಪ್ರತಿಕ್ರಿಯಿಸಿದ ಮನೆ ಮಾಲೀಕ ವಿಶ್ವನಾಥ ರೆಡ್ಡಿ ಒಂದು ವೇಳೆ ಬಾಗಿಲು ಓಪನ್ ಆಗಿದ್ದರೆ ನಮ್ಮನ್ನು ಕೊಲೆ ಮಾಡುತ್ತಿದ್ದರು. ಕೊಲೆ ಮಾಡಲು ಬಂದವರು ಯಾರು ಎಂಬುದು ನಮಗೆ ಗೊತ್ತಿಲ್ಲ. ನಮಗೆ ಯಾರ ಜೊತೆಯೂ ಯಾವುದೇ ವೈಷಮ್ಯ ಅಥವಾ ದ್ವೇಷ ಇರಲಿಲ್ಲ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪರಾರಿಯಾಗಿರುವ ನಾಲ್ವರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.