2026-07-26 01:43:34

Dharmendra Pradhan announced his resignation | ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಧರ್ಮೇಂದ್ರ ಪ್ರಧಾನ್! X ಬಯೋ ಕೂಡ ಬದಲಾವಣೆ | SNK

Dharmendra Pradhan announced his resignation | ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಧರ್ಮೇಂದ್ರ ಪ್ರಧಾನ್! X ಬಯೋ ಕೂಡ ಬದಲಾವಣೆ | SNK

ನವದೆಹಲಿ: ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿರುವ ನೀಟ್-ಯುಜಿ (NEET-UG) 2026 ಪರೀಕ್ಷಾ ಅಕ್ರಮ ಹಾಗೂ ಗೊಂದಲಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿಗಳು ಗೊಂದಲದ ಬಲೆಯಲ್ಲಿ ಸಿಲುಕಬಾರದು ಹಾಗೂ ಅವರ ಭವಿಷ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ತಳೆದಿರುವುದಾಗಿ ಅವರು ತಿಳಿಸಿದ್ದಾರೆ. ​ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ, "ಈ ವಿಚಾರವು ಈಗ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಾಗಿ ಉಳಿದಿಲ್ಲ. ದೇಶದ ಯುವಶಕ್ತಿ ಗೊಂದಲಕ್ಕೆ ಒಳಗಾಗುವುದನ್ನು ತಡೆಯುವುದು ನನ್ನ ಮುಖ್ಯ ಉದ್ದೇಶ. ಕಳೆದ 10 ದಿನಗಳ ಬೆಳವಣಿಗೆಗಳು ನನಗೆ ತೀವ್ರ ಬೇಸರ ತಂದಿವೆ," ಎಂದು ಪ್ರಧಾನ್ ಉಲ್ಲೇಖಿಸಿದ್ದಾರೆ. ಜಂತರ್ ಮಂತರ್ ಸೇರಿದಂತೆ ದೇಶದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳನ್ನು ದೇಶವಿರೋಧಿ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

​ಮೇ 3 ರಂದು ನಡೆದಿದ್ದ ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮಗಳು ಕಂಡುಬಂದ ತಕ್ಷಣವೇ ಕೇಂದ್ರ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗಿತ್ತು. ಮುಂದಿನ ವರ್ಷದಿಂದ ಈ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ (CBT) ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮರುಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವುದು ಸರ್ಕಾರದ ಆದ್ಯತೆಯಾಗಿತ್ತು ಎಂದು ಪ್ರಧಾನ್ ಹೇಳಿದ್ದಾರೆ.
​ಜುಲೈ 16 ರಂದು ಪ್ರಕಟವಾದ ಫಲಿತಾಂಶದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಆದರೆ, ಕೆಲವು ಜವಾಬ್ದಾರಿಯುತ ಸ್ಥಾನದಲ್ಲಿದ್ದ ವ್ಯಕ್ತಿಗಳು ವಿದ್ಯಾರ್ಥಿಗಳನ್ನು ಹಾದಿತಪ್ಪಿಸಲು ಮತ್ತು ಗೊಂದಲ ಸೃಷ್ಟಿಸಲು ಯತ್ನಿಸಿದ್ದು ತಮಗೆ ನೋವು ತಂದಿದೆ ಎಂದು ಸಂಸದ ಪ್ರಧಾನ್ ಆರೋಪಿಸಿದ್ದಾರೆ. ​ಸೋನಮ್ ವಾಂಗ್ಚುಕ್ ಅವರ 26 ದಿನಗಳ ಉಪವಾಸ ಸತ್ಯಾಗ್ರಹ ಮತ್ತು ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಪ್ರಸ್ತುತ ಕೇಂದ್ರ ಸರ್ಕಾರವು ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ವಿಶೇಷ ವೇಗದ ಗತಿ ನ್ಯಾಯಾಲಯಗಳು ಹಾಗೂ ವಿಶೇಷ ಕಾರ್ಯಪಡೆ (STF) ರಚನೆ ಒಳಗೊಂಡ ಕಠಿಣ ಕಾನೂನು ತರಲು ಸಿದ್ಧತೆ ನಡೆಸಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.