ನವದೆಹಲಿ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಏಪ್ರಿಲ್ 7 ರಿಂದ ಆರಂಭವಾಗಲಿದೆ. 9 ನ್ಯಾಯಮೂರ್ತಿಗಳ ಪ್ರತ್ಯೇಕ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೊಯ್‌ಮಲ್ಯಾ ಬಾಗ್‌ಚಿ ಮತ್ತು ವಿಪುಲ್ ಎಂ ಪಂಚೋಲಿ ಅವರಿದ್ದ ನ್ಯಾಯಪೀಠವು ಈ ತೀರ್ಮಾನವನ್ನು ಪ್ರಕಟಿಸಿದೆ.
ಶಬರಿಮಲೆ ತೀರ್ಪಿನ ಮರುಪರಿಶೀಲನೆಯನ್ನು ಬೆಂಬಲಿಸುವ ಕಕ್ಷಿದಾರರು ಏಪ್ರಿಲ್ 7 ರಿಂದ ಏಪ್ರಿಲ್ 9 ರವರೆಗೆ ತಮ್ಮ ವಾದಗಳನ್ನು ಮಂಡಿಸಲು ಮತ್ತು ಮರುಪರಿಶೀಲನೆಯನ್ನು ವಿರೋಧಿಸುವ ಕಕ್ಷಿದಾರರು ಏಪ್ರಿಲ್ 14 ರಿಂದ 16 ರವರೆಗೆ ವಾದ ಮಂಡಿಸಲು ಕಾಲಾವಕಾಶ ನೀಡಲಾಗಿದೆ. ಏಪ್ರಿಲ್ 22 ರಂದು ಸಂಪೂರ್ಣ ವಿಚಾರಣೆ ಮುಕ್ತಾಯಗೊಳ್ಳಲಿದೆ.
ಕೇರಳದ ಸುಪ್ರಸಿದ್ಧ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಋತುಮತಿಯಾಗುವ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿತ್ತು. ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2018 ರಲ್ಲಿ ಈ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿನಿಂದ ಉದ್ಭವಿಸಿದ ಹಲವಾರು ಮರುಪರಿಶೀಲನಾ ಅರ್ಜಿಗಳು ಮತ್ತು ರಿಟ್ ಅರ್ಜಿಗಳನ್ನು ತ್ರಿಸದಸ್ಯ ಪೀಠ ವಿಚಾರಣೆ ನಡೆಸಿದೆ.
ಪ್ರಕರಣದ ಹಿನ್ನೆಲೆ: ನವೆಂಬರ್ 2018 ರಲ್ಲಿ ಅಂದಿನ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು 4:1 ಬಹುಮತದೊಂದಿಗೆ ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಭಕ್ತಿಯು ಲಿಂಗ ತಾರತಮ್ಯಕ್ಕೆ ಒಳಪಡುವುದಿಲ್ಲ ಎಂದೂ ಅಭಿಪ್ರಾಯಪಟ್ಟಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿದ್ದವು.