2026-03-07 01:46:07

Getting US approval to buy Russian oil | ರಷ್ಯಾ ತೈಲ ಖರೀದಿಸಲು ಅಮೇರಿಕಾದ ಒಪ್ಪಿಗೆ ಪಡೆಯುವುದು ನಾಚಿಕೆಗೇಡಿನ ಸಂಗತಿ: ಹರಿಪ್ರಸಾದ್‌ ವಾಗ್ದಾಳಿ | Speed News Kannada

Getting US approval to buy Russian oil | ರಷ್ಯಾ ತೈಲ ಖರೀದಿಸಲು ಅಮೇರಿಕಾದ ಒಪ್ಪಿಗೆ ಪಡೆಯುವುದು ನಾಚಿಕೆಗೇಡಿನ ಸಂಗತಿ: ಹರಿಪ್ರಸಾದ್‌ ವಾಗ್ದಾಳಿ | Speed News Kannada

ಬೆಂಗಳೂರು: ಭಾರತವೂ ರಷ್ಯಾದಿಂದ ತೈಲ ಖರೀದಿಸಲು ಅಮೇರಿಕಾದ ಒಪ್ಪಿಗೆ ಪಡೆಯುವುದು ರಾಷ್ಟ್ರದ ಘನತೆಯನ್ನು ಗುಲಾಮಗಿರಿ ವ್ಯವಸ್ಥೆಗೆ ವಿಶ್ವಗುರು ತಳ್ಳಿರುವ ನಿದರ್ಶನಕ್ಕೆ ಸಾಕ್ಷಿ ಎಂದು ಕಾಂಗ್ರೆಸ್‌ ಮುಖಂಡ ಮೇಲ್ಮನೆ ಸದಸ್ಯ ಬಿ ಕೆ ಹರಿಪ್ರಸಾದ್‌ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸಲು “30 ದಿನಗಳ ವಿನಾಯಿತಿ” ನೀಡಲಾಗಿದೆ ಎಂದು ಅಮೇರಿಕಾ ಸಚಿವರು ಹೇಳಿದ್ದಾರೆ. ಇದು ಸ್ವತಂತ್ರ ಭಾರತದ ವಿದೇಶಾಂಗ ಗೌರವಕ್ಕೆ ಬಿದ್ದಿರುವ ಅಪಮಾನಕರ ಹೊಡೆತ. ಒಂದು ಸಾರ್ವಭೌಮ ರಾಷ್ಟ್ರ ತನ್ನ ಇಂಧನ ಅವಶ್ಯಕತೆಗಳನ್ನು ಯಾವ ದೇಶದಿಂದ ಪೂರೈಸಿಕೊಳ್ಳಬೇಕು ಎಂಬ ನಿರ್ಧಾರಕ್ಕೂ ಇನ್ನೊಂದು ರಾಷ್ಟ್ರದಿಂದ “ವಿನಾಯಿತಿ” ಪಡೆಯಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರೆ, ಅದು ಕೇವಲ ರಾಜತಾಂತ್ರಿಕ ವೈಫಲ್ಯವಲ್ಲ; ಅದು ರಾಷ್ಟ್ರದ ಆತ್ಮಗೌರವವನ್ನೇ ತುತ್ತುಮಾಡಿದ ಆಡಳಿತದ ನಗ್ನ ಸತ್ಯ ಎಂದು ಟೀಕಿಸಿದ್ದಾರೆ.
 ಸ್ವತಂತ್ರ ನಂತರ ಭಾರತವೂ ಸ್ವತಂತ್ರ ವಿದೇಶಾಂಗ ಧೋರಣೆಯ ಮೂಲಕ ವಿಶ್ವದಲ್ಲಿ ಗೌರವ ಪಡೆದಿದ್ದ ಭಾರತ, ಇಂದು ಅಮೇರಿಕಾದ ರಾಜಕೀಯ ತಾಳಕ್ಕೆ ತಕ್ಕಂತೆ ಕುಣಿಯುವ ಸ್ಥಿತಿಗೆ ಕುಸಿದಿರುವುದು ಆತಂಕಕಾರಿ ಬೆಳವಣಿಗೆ. ಇದು ಭಾರತದ ಸ್ವಾಭಿಮಾನವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹರಾಜು ಹಾಕಿದಂತಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ಗೌರವವನ್ನು ಇಷ್ಟು ಮಟ್ಟಿಗೆ ಕುಗ್ಗಿಸಿ, ವಿಶ್ವಗುರುವಿನ ಘೋಷಣೆಗಳ ಹಿಂದೆ ರಾಜತಾಂತ್ರಿಕ ದೀನತೆಯನ್ನು ಮುಚ್ಚಿಟ್ಟ ಪ್ರಧಾನಿಯನ್ನು ನೋಡಲು ಸಾಧ್ಯವಿಲ್ಲ ಎಂದಿದ್ದಾರೆ. 
ವಿಶ್ವಗುರುವಿನ ಬೃಹತ್ ಭಾಷಣಗಳ ಹಿಂದೆ ಅಡಗಿರುವ ವಿದೇಶಾಂಗ ದೌರ್ಬಲ್ಯವನ್ನು ಇಂದು ಜಗತ್ತೇ ಗಮನಿಸುತ್ತಿದೆ. ಆತ್ಮಗೌರವದಿಂದ, ಸ್ವತಂತ್ರ ರಾಜತಾಂತ್ರಿಕ ಧೈರ್ಯದಿಂದ ಮಾತ್ರ ರಾಷ್ಟ್ರದ ಮಾನ ಉಳಿಯುತ್ತದೆ. ಆ ಧೈರ್ಯವೇ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕಾಣೆಯಾಗಿರುವುದು ಇಂದಿನ ಭಾರತದ ಅತ್ಯಂತ ಕಹಿ ಸತ್ಯ. ಭಾರತಕ್ಕೆ ಬೇಕಿರುವುದು ಬಲಿಷ್ಟ ಆಡಳಿತಗಾರ ಎಂದು ಹರಿಪ್ರಸಾದ್‌ ಹೇಳಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.