ಕೋಲ್ಕತ್ತ: ಚುನಾವಣಾ ಆಯೋಗವು ನಡೆಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ, ಪಟ್ಟಿಯಿಂದ ಮತದಾರರ ಹೆಸರುಗಳನ್ನು ಮನಸೋ ಇಚ್ಚೆ ತೆಗೆದು ಹಾಕಲಾಗಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎರಡನೇ ದಿನವಾದ ಇಂದೂ ಸಹ ಧರಣಿ ನಡೆಸುತ್ತಿದ್ದಾರೆ.
ನಿನ್ನೆ ಶುಕ್ರವಾರ ಮಮತಾ ಅವರು ಕೋಲ್ಕತ್ತದ ಎಸ್‌ಪ್ಲೇನೇಡ್ ಮೆಟ್ರೊ ಚಾನೆಲ್‌ನಲ್ಲಿ ಧರಣಿ ಆರಂಭಿಸಿದ್ದರು. ಅವರು ರಾತ್ರಿಯಿಡೀ ಇದೇ ಸ್ಥಳದಲ್ಲಿದ್ದರು.
ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲು ಬಿಜೆಪಿ ಮತ್ತು ಚುನಾವಣಾ ಆಯೋಗ ಪಿತೂರಿ ನಡೆಸುತ್ತಿದ್ದು ಇವರ ಮುಖವಾಡ ಕಳಚುತ್ತೇನೆ ಎಂದು ಅವರು ಗುಡುಗಿದಾರೆ. ಲಕ್ಷಾಂತರ ಮತದಾರರು ಮೃತಪಟ್ಟಿರುವುದಾಗಿ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ನಮೂದಿಸಲಾಗಿದೆ. ಯಾರನ್ನು ಮೃತಪಟ್ಟಿದ್ದಾರೆ ಎಂದು ಆಯೋಗ ಘೋಷಿಸಿದೆಯೋ, ಅಂತಹ ಮತದಾರರನ್ನು ನಾನು ಈ ಪ್ರತಿಭಟನಾ ಸ್ಥಳಕ್ಕೆ ಕರೆತಂದು ಹಾಜರುಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇದರಿಂದಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಚುನಾವಣಾ ಆಯೋಗದ (ಇ.ಸಿ) ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.
ಚುನಾವಣಾ ಆಯೋಗವು ಫೆಬ್ರುವರಿ 28ರಂದು ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ, ಕಳೆದ ವರ್ಷ ನವೆಂಬರ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದ ನಂತರ, ಸುಮಾರು 63.66 ಲಕ್ಷ ಹೆಸರುಗಳನ್ನು (ಒಟ್ಟು ಮತದಾರರ ಶೇ 8.3ರಷ್ಟು) ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಿಂದಾಗಿ ಮತದಾರರ ಸಂಖ್ಯೆಯು ಸುಮಾರು 7.66 ಕೋಟಿಯಿಂದ 7.04 ಕೋಟಿಗೆ ಇಳಿಕೆಯಾಗಿದೆ. ಇದರ ವಿರುದ್ಧ ಮಮತಾ ಬ್ಯಾನರ್ಜಿ ಅವರು ಗುಡುಗಿದ್ದಾರೆ.