2026-05-19 10:33:28

ಶಿವಾನಂದ ನೀಲಣ್ಣನವರ ವಂಚನೆ ಕುರಿತು ಸಚಿವ ಜಾರಕಿಹೊಳಿ ಹೇಳಿದ್ದೇನು? |Speed News Kannada

ಶಿವಾನಂದ ನೀಲಣ್ಣನವರ ವಂಚನೆ ಕುರಿತು ಸಚಿವ ಜಾರಕಿಹೊಳಿ ಹೇಳಿದ್ದೇನು? |Speed News Kannada

ಬೆಳಗಾವಿ : ಸುಮಾರು ನಾಲ್ಕೂವರೆ ಸಾವಿರ ಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಸಂಸ್ಥೆ ಮಾಲೀಕ ಶಿವಾನಂದ ನೀಲಣ್ಣವರ್ ಪ್ರಕರಣವನ್ನು ಸರ್ಕಾರ ಅಧಿಕೃತವಾಗಿ ಸಿಐಡಿ ಹಸ್ತಾಂತರಿಸಿದೆ.

ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮದೇ ಜಿಲ್ಲೆಯಲ್ಲಿ ನಡೆದಿರುವ ಈ ವಂಚನೆ ಕುರಿತು ಅವರು ಪ್ರತಿಕ್ರಿಯೆ ನೀಡಿ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ. ತನಿಖೆಯನ್ನು ಪೂರ್ಣಗೊಳಿಸಿ ವರದಿ ನೀಡಿದ ನಂತರವೇ ಈ ಹಗರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲಿದೆ ಎಂದರು.

ಈ ವಂಚನೆ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ, ಇದು ಸಂಪೂರ್ಣವಾಗಿ ಸಾರ್ವಜನಿಕರ ಹಣಕಾಸು ವಂಚನೆಗೆ ಸಂಬಂಧಿಸಿದ ಪ್ರಕರಣವಾಗಿದೆ. ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ಮೋಸ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.

 

ಜನರು ಎಚ್ಚರ ವಹಿಸಬೇಕು: ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗಿ ಸಾರ್ವಜನಿಕರು ತಮ್ಮ ಹಣವನ್ನು ಅನಧಿಕೃತ ಸಂಸ್ಥೆಗಳಲ್ಲಿ ಹೂಡಿಕೆ ಮಾಡಬಾರದು. ಹಣ ಹೂಡಿಕೆ ಮಾಡುವಾಗ ಎಚ್ಚರದಿಂದ ಇರಬೇಕು. ಯಾವುದೇ ಸಂಸ್ಥೆ ಅತಿಯಾದ ಆಸೆ ತೋರಿಸಿದಾಗ ಸಾರ್ವಜನಿಕರು ಜಾಗರೂಕರಾಗಿರಬೇಕು. ಇಂತಹ ವಂಚನೆ ತಡೆಯಲು ಕಾನೂನು ಕ್ರಮದ ಜೊತೆಗೆ ಜನರ ಜಾಗೃತಿಯೂ ಮುಖ್ಯ ಎಂದು ತಿಳಿಸಿದರು.

ಬೆಲೆ ಏರಿಕೆ: ಬಿಜೆಪಿ ಚಾಳಿ:

ಪೆಟ್ರೋಲ್, ಡೀಸೆಲ್,ಅಡುಗೆ ಅನಿಲ ಸಿಎನ್‌ ಜಿ  ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಗಳು ಮುಗಿದ ತಕ್ಷಣ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದು ಕೇಂದ್ರ ಸರ್ಕಾರಕ್ಕೆ ಹೊಸದೇನಲ್ಲ, ಇದು ಅವರ ಹಳೆಯ ಚಾಳಿಯೇ ಆಗಿದೆ. ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರ ಬದುಕು ದುಸ್ತರವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಯುಪಿಎ ಸರ್ಕಾರದಲ್ಲಿ ಡೀಸೆಲ್‌, ಪೆಟ್ರೋಲ್ ದರ ಕೇವಲ 1 ರೂ. ಹೆಚ್ಚಾದರೂ ದೇಶಾದ್ಯಂತ ಬೀದಿಗಿಳಿದು ದೊಡ್ಡ ಹಂಗಾಮಾ ಮಾಡುತ್ತಿದ್ದ ಇದೇ ಬಿಜೆಪಿ ನಾಯಕರು, ಇಂದು ತಾವೇ ನಿರಂತರವಾಗಿ ಬೆಲೆ ಏರಿಸುತ್ತಿದ್ದರೂ ಮೌನ ವಹಿಸಿರುವುದರ ಹಿಂದೆ ರಾಜಕೀಯ ಸ್ವಾರ್ಥ ಅಡಗಿದೆ. ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ನಾಯಕರು ಜನಸಾಮಾನ್ಯರ ಆರ್ಥಿಕ ಸಂಕಷ್ಟಗಳಿಗೆ ಸಂಪೂರ್ಣವಾಗಿ ಕುರುಡಾಗಿದ್ದಾರೆ ಎಂದು ಟೀಕಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.