ಬೆಂಗಳೂರು: ಮೇ 20 ಬುಧವಾರ ಸಾರಿಗೆ ನೌಕರರು ಮುಷ್ಕರ ನಡೆಸುವುದು ಖಚಿತವಾಗಿದೆ. ಬುಧವಾರದಂದು ಕೆಲಸಕ್ಕೆ ಹಾಜರಾಗದಿದ್ದರೆ ಸಂಬಳ ಕೊಡುವುದಿಲ್ಲ ಎಂದೂ ಎಚ್ಚರಿಕೆ ನೀಡಲಾಗಿದೆ. ಮುಷ್ಕರದಲ್ಲಿ ಭಾಗಿಯಾಗದಂತೆ ಕೆಎಸ್ಆರ್ಟಿಸಿ ಎಂಡಿ ಅಕ್ರಂಪಾಷಾ ಆದೇಶಿಸಿದ್ದಾರೆ. ವಿಶೇಷ ಸೂಚನೆ ಹೊರಡಿಸಿರುವ ಅವರು, ಕರ್ತವ್ಯಕ್ಕೆ ಗೈರುಹಾಜರಾದ ನೌಕರರ ವಿರುದ್ಧ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆದರೂ ಸಾರಿಗೆ ನೌಕರರು ಪಟ್ಟು ಸಡಿಲಿಸಸಲು ಸಿದ್ದರಿಲ್ಲ. ಮುಷ್ಕರ ನಡೆಸುವುದು ಖಚಿತ ಎಂದು ತಿಳಿಸಿದ್ದಾರೆ. ಸಾರಿಗೆ ನೌಕರರ ಮುಖಂಡ ವಿಜಯ್ ಭಾಸ್ಕರ್ ಮಾತನಾಡಿ ನಮ್ಮ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು, ನೌಕರರನ್ನು ಬಂಧಿಸಿದರೆ ಬಸ್ ಯಾರು ಓಡಿಸುತ್ತಾರೆ? ಎಸ್ಮಾ ಜಾರಿಯಲ್ಲಿದ್ದರೂ ನಾವು ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಪ್ರತಿಕ್ರಿಯೆ ನೀಡಿದ್ದು, ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿರುವುದು ಕಾನೂನು ಬಾಹಿರ. ಈಗಾಗಲೇ ‘ನೋ ವರ್ಕ್ ನೋ ಪೇ’ ಆದೇಶ ಜಾರಿಮಾಡಲಾಗಿದ್ದು, ಸಾರಿಗೆ ಮುಷ್ಕರಕ್ಕೆ ಕರೆ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲಾ ಜಿಲ್ಲೆಗಳ ಎಸ್ಪಿ, ಆರ್ಟಿಒಗಳ ಜೊತೆ ಚರ್ಚೆ ಮಾಡಿದ್ದು, ನಾಳೆ ಸಾಧನಾ ಸಮಾವೇಶಕ್ಕೆ 2,000 ಬಸ್ ಕಳುಹಿಸಲಾಗುತ್ತಿದೆ ಎಂದರು.
ಮೇ 20ರಂದು ರಾಜ್ಯದ ಎಲ್ಲಾ ಡಿಪೋಗಳಿಗೆ ಭದ್ರತೆ ನೀಡಲಾಗುವುದು. ಪೊಲೀಸ್ ಇಲಾಖೆ ಜೊತೆ ಚರ್ಚಿಸಲಾಗಿದೆ. ಒಂದು ವೇಳೆ ಮುಷ್ಕರ ನಡೆದರೆ ಸಾರಿಗೆ ಇಲಾಖೆಯ 4 ನಿಗಮಗಳಲ್ಲಿ 5,000 ತರಬೇತಿ ಚಾಲಕರಿದ್ದಾರೆ. ಅವರನ್ನು ನಿಯೋಜಿಸಲಾಗುತ್ತದೆ. ಜೊತೆಗೆ ಖಾಸಗಿ ಬಸ್ಗಳ ಮಾಲೀಕರ ಸಂಘದ ಜೊತೆಗೂ ಚರ್ಚೆ ಮಾಡಿದ್ದು, ಪ್ರಯಾಣಿಕರಿಗೆ ತೊಂದರೆ ಆಗದಂತೆ ಖಾಸಗಿ ಬಸ್ಗಳನ್ನು ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ.