ತಿರುವನಂತಪುರ: ಕೇರಳಂ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ವಿ.ಡಿ. ಸತೀಶನ್ ಅವರು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ಹಲವಾರು ಜನಪರ ಘೋಷಣೆಗಳನ್ನು ಮಾಡಿದ್ದಾರೆ.
ಜೂನ್ 15ರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಗೌರವ ಧನ ಹೆಚ್ಚಳ ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಇಲಾಖೆಯನ್ನು ರಚಿಸುವುದಾಗಿ ಅವರು ಘೋಷಿಸಿದ್ದಾರೆ.
ಇಂದು ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೀಘ್ರದಲ್ಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆಯ ಕುರಿತು ವಿವರವಾದ ಮಾರ್ಗಸೂಚಿಯನ್ನು ಹೊರಡಿಸಲಾಗುತ್ತದೆ. ದೇಶದಲ್ಲೇ ಮೊದಲ ಬಾರಿಗೆ ವೃದ್ಧರಿಗಾಗಿ ಪ್ರತ್ಯೇಕ ಇಲಾಖೆ ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ. ಹಿರಿಯ ನಾಗರಿಕರಿಗೆ ಗೌರವಾನ್ವಿತ ಆರೈಕೆ ಖಾತ್ರಿಪಡಿಸುವ ಮೂಲಕ ಕೇರಳಂ ಮಾದರಿ ಆಗಲಿದೆ ಎಂದು ಸತೀಶನ್ ಹೇಳಿದ್ದಾರೆ.
ಆಶಾ ಕಾರ್ಯಕರ್ತೆಯರ ಗೌರವಧನವನ್ನು ತಿಂಗಳಿಗೆ ರೂ.3000 ಹೆಚ್ಚಳ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಶಾಲಾ ಅಡುಗೆ ಸಿಬ್ಬಂದಿಗಳಿಗೆ ಮಾಸಿಕ ರೂ.1,000 ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕೇರಳಂ ವಿಧಾನಸಭೆಯಲ್ಲಿ ಮೇ 21ರಂದು ನೂತನ ಶಾಸಕರ ಪ್ರಮಾಣವಚನ ಮತ್ತು ಮೇ 22ರಂದು ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ.