2026-05-19 09:43:37

ಸರ್ಕಾರ ರೈತರ ಸಮಾಧಿ ಮೇಲೆ ಸಮಾವೇಶ ಮಾಡುತ್ತಿದೆ: ಕಾಂಗ್ರೆಸ್‌ ವಿರುದ್ಧ ಆರ್‌.ಅಶೋಕ ವಾಗ್ದಾಳಿ|Speed News Kannada

ಸರ್ಕಾರ ರೈತರ ಸಮಾಧಿ ಮೇಲೆ ಸಮಾವೇಶ ಮಾಡುತ್ತಿದೆ: ಕಾಂಗ್ರೆಸ್‌ ವಿರುದ್ಧ ಆರ್‌.ಅಶೋಕ ವಾಗ್ದಾಳಿ|Speed News Kannada

ಬೆಂಗಳೂರು: ರಾಜ್ಯದಲ್ಲಿ ರೈತರು ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶ ನಡೆಸುತ್ತಿರುವುದು ರೈತರ ಸಮಾಧಿ ಮೇಲೆ ರಾಜಕೀಯ ಮಾಡುವಂತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ವಾಗ್ದಾಳಿ ನಡೆಸಿದ್ದಾರೆ.

ನಾಳೆ ತುಮಕೂರಿನಲ್ಲಿ ಸರ್ಕಾರದ ಸಾಧನಾ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳು ಈಗ ರೈತರಿಗೆ “ಆತ್ಮಹತ್ಯೆ ಗ್ಯಾರೆಂಟಿ”, “ಬೆಳೆ ಪರಿಹಾರ ಸಿಗದ ಗ್ಯಾರೆಂಟಿ”, “ನೀರಿಲ್ಲದ ಗ್ಯಾರೆಂಟಿ” ಹಾಗೂ “ಮೂರು ಫೇಸ್ ವಿದ್ಯುತ್ ಸಿಗದ ಗ್ಯಾರೆಂಟಿ”ಗಳಾಗಿ ಪರಿಣಮಿಸಿವೆ. ಕಳೆದ ಮೂರು ವರ್ಷಗಳಿಂದ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಬಜೆಟ್‌ನಲ್ಲಿಯೂ ರೈತರಿಗೆ ಸಮರ್ಪಕ ಅನುದಾನ ನೀಡಿಲ್ಲ. ಚುನಾವಣಾ ಘೋಷಣಾಪತ್ರದಲ್ಲಿ ರೈತರಿಗೆ ಹೆಚ್ಚಿನ ನೆರವು ನೀಡುವುದಾಗಿ ಹೇಳಿದ್ದರೂ ಎಲ್ಲವೂ ಶೂನ್ಯವಾಗಿದೆ ಎಂದರು.

ರೈತರ ನೋವಿಗೆ ಕಿವಿಗೊಡದ ಸರ್ಕಾರ:

ಹಾವೇರಿ, ಕೋಲಾರ, ಬೆಳಗಾವಿ, ಕೊಪ್ಪಳ,ಸೇರಿದಂತೆ ಕಲಬುರಗಿ, ಚಿತ್ರದುರ್ಗ, ಬಾಗಲಕೋಟೆ, ದಾವಣಗೆರೆ, ಯಾದಗಿರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಬೆಳೆ ಹಾನಿಯಾಗಿದೆ. ರೈತರು ಸಂಕಷ್ಟದಲ್ಲಿದ್ದಾಗ ಅವರ ಮನೆಗಳಿಗೆ ತೆರಳಿ ಧೈರ್ಯ ಹೇಳದ ಸಚಿವರು, ಈಗ ಸಾಧನಾ ಸಮಾವೇಶಕ್ಕಾಗಿ ಮನೆ ಮನೆಗೆ ಆಹ್ವಾನ ಪತ್ರಿಕೆ ಹಂಚುತ್ತಿದ್ದಾರೆ. ಜನಸ್ಪಂದನ ಕಾರ್ಯಕ್ರಮ ಮಾಡುತ್ತೇವೆ ಎಂದಿದ್ದ ಸರ್ಕಾರಕ್ಕೆ ಈಗ ಜನರೇ ಬಡಿಗೆ ಹಿಡಿದು ಸ್ಪಂದನೆ ನೀಡುವ ಕಾಲ ಬಂದಿದೆ ಎಂದು ವ್ಯಂಗ್ಯವಾಡಿದರು.

ಸಮಾವೇಶದ ಹೆಸರಲ್ಲಿ ಲೂಟಿ:

ಪ್ರಕೃತಿ ವಿಕೋಪ ಪರಿಹಾರಕ್ಕಾಗಿ 5,000 ಕೋಟಿ ರೂ. ಮೀಸಲಿಡುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಸರ್ಕಾರ ಒಂದು ನಯಾಪೈಸೆಯನ್ನೂ ಠೇವಣಿ ಇಟ್ಟಿಲ್ಲ. ಬಳ್ಳಾರಿಯಲ್ಲಿ ನಡೆದ ಸಮಾವೇಶಕ್ಕೆ 20 ಕೋಟಿ ರೂ. ಖರ್ಚು ಮಾಡಲಾಗಿದೆ. ಸಮಾವೇಶದ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲಾಗುತ್ತಿದೆ. ಸರ್ಕಾರದ 12 ಕೋಟಿ ರೂ.ಗಳಲ್ಲಿ 8 ಕೋಟಿ ರೂ. ದೋಚುವ ಉದ್ದೇಶದಿಂದಲೇ ಈ ಸಮಾವೇಶ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕೃಷಿ ವೃದ್ಧಿ ದರ ಪಾತಾಳಕ್ಕೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಕೃಷಿ ವೃದ್ಧಿದರ (GVA) 17% ಇತ್ತು. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅದು 10.4%ಕ್ಕೆ ಕುಸಿದಿದೆ. ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ 2.22% ಕಡಿಮೆಯಾಗಿದ್ದರೆ, ಕರ್ನಾಟಕದಲ್ಲಿ ಮಾತ್ರ 22.61% ಹೆಚ್ಚಳವಾಗಿದೆ. 2023ರಲ್ಲಿ 2,423 ರೈತರ ಆತ್ಮಹತ್ಯೆ ಪ್ರಕರಣಗಳಿದ್ದರೆ, 2024ರಲ್ಲಿ ಅದು 2,971ಕ್ಕೆ ಏರಿಕೆಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು NCRB ವರದಿ ಹೇಳಿದೆ. ಇದು ಕಾಂಗ್ರೆಸ್ ಸರ್ಕಾರದ “ಆರನೇ ಗ್ಯಾರೆಂಟಿ” ಎಂದು ಕಿಡಿಕಾರಿದರು.

ಯಾರೂ ಕೇಳದೇ ಇದ್ದರೂ ಕಾಂಗ್ರೆಸ್ ಸರ್ಕಾರ ಜನರ ಹಣದಲ್ಲಿ ಸಂಭ್ರಮಾಚರಣೆ ನಡೆಸುತ್ತಿದೆ. ಬೆಳ್ಳಿ ಕಿರೀಟ, ಚಿನ್ನದ ಕಿರೀಟ, ಮಲ್ಲಿಗೆ ಹಾರ ಹಾಗೂ ಔತಣಕೂಟಗಳಿಗಾಗಿ ಈ ಸಮಾವೇಶ ನಡೆಸಲಾಗುತ್ತಿದೆ. ಇದು ರೈತರ ಸಮಾಧಿ ಮೇಲೆ ನಡೆಯುತ್ತಿರುವ ಸಮಾವೇಶವಾಗಿದ್ದು, ರೈತರ ಶಾಪದಿಂದ ಈ ಸರ್ಕಾರ ತೊಲಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.