ನವದೆಹಲಿ, ಫೆಬ್ರವರಿ 1: ಲೋಕಸಭೆಯಲ್ಲಿಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮಾಡಿದ ಘೋಷಣೆಗಳನ್ನು ವಿವರಿಸಿದ್ದಾರೆ. ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮಶೀಲತೆಯತ್ತ ಗಮನ ಹರಿಸಲಾಗುವುದು. ಕೌಶಲ್ಯಾಧಾರಿತ ಉದ್ಯೋಗಕ್ಕೆ ಒತ್ತು ನೀಡಲಾಗುವುದು. ಆರೋಗ್ಯ ವೃತ್ತಿಪರರನ್ನು ಉತ್ಪಾದಿಸುವ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು 5 ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಯೋಜನೆಗಳಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ ಎಂದು ಭಾಷಣದಲ್ಲಿ ವಿವರಿಸಿದ್ದಾರೆ
ಆಯುಷ್ ಕೇಂದ್ರಗಳು, ರೋಗನಿರ್ಣಯ, ಶಸ್ತ್ರಚಿಕಿತ್ಸೆಯ ನಂತರದ ಆರೈಕೆ ಮತ್ತು ಪುನರ್ವಸತಿ ಕೇಂದ್ರಗಳು ಸೇರಿದಂತೆ ಆರೋಗ್ಯ ರಕ್ಷಣಾ ಸಂಕೀರ್ಣಗಳನ್ನು ನಿರ್ಮಿಸಲಾಗುವುದು. ಇದು ಆರೋಗ್ಯ ವೃತ್ತಿಪರರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ವಿಶ್ವಾದ್ಯಂತ ಮನ್ನಣೆ ಗಳಿಸಿರುವ ಪ್ರಾಚೀನ ಯೋಗ ಮತ್ತು ಆಯುರ್ವೇದ ಪದ್ಧತಿಗಳಿಗೆ ಒತ್ತು ನೀಡಲಾಗುವುದು. 3 ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಪ್ರಮುಖ ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಕಾರಿಡಾರ್ಗಳ ಬಳಿ 5 ವಿಶ್ವವಿದ್ಯಾಲಯ ಟೌನ್ಶಿಪ್ಗಳನ್ನು ಸ್ಥಾಪಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.