2026-03-07 01:41:10

vote bank based budget;prahlad joshi Speed News Kannada

vote bank based budget;prahlad joshi  Speed News Kannada

 

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 17ನೇ ಬಜೆಟ್ ₹ 4.48 ಲಕ್ಷ ಕೋಟಿ ಬೃಹತ್ ಗಾತ್ರದ ಹೆಗ್ಗಳಿಕೆಗಷ್ಟೇ ಸೀಮಿತ. ಅಂತೆಯೇ ರಾಜ್ಯದ ಸಾಲ ಹೆಚ್ಚಳ ಮತ್ತು ವಿತ್ತೀಯ ಕೊರತೆಯಲ್ಲಿ ಸಹ ದಾಖಲೆ ನಿರ್ಮಿಸಿದ್ದಲ್ಲದೆ, "ವೋಟ್ ಬ್ಯಾಂಕ್" ಪ್ರೇರಿತ ಎಂಬಂತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಈ ಬಜೆಟ್ ಅಲ್ಲಿ ರಾಜ್ಯವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವ ಬದಲು ಆರ್ಥಿಕ ಸಂಕಷ್ಟವನ್ನು ತೆರೆದಿಟ್ಟಿದೆ. ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಕೆಲವೇ ಕೆಲವು ಸಮಾಜಗಳಿಗೆ ಬಜೆಟ್ ಮೀಸಲಿಟ್ಟಂತೆ ಕಾಣುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ₹4.48 ಲಕ್ಷ ಕೋಟಿ ದೊಡ್ಡ ಗಾತ್ರದ ಬಜೆಟ್ ಆಗಿದ್ದರೂ ಇದೊಂದು ಸ್ಪಷ್ಟ ಅರ್ಥ ನೀತಿ ಬಿಂಬಿಸದ, 'ಅರ್ಥ'ವಿಲ್ಲದ ಈ ಆಯವ್ಯಯ ಥೇಟ್ ರಾಜಕೀಯ ಭಾಷಣದಂತಿದೆಯೇ ಹೊರತು ಯಾವುದೇ ಅರ್ಥಶಾಸ್ತ್ರದ ಮಾರ್ಗದರ್ಶಿಗೆ ಒಳಪಟ್ಟಂತೆ ಕಾಣುತ್ತಿಲ್ಲ ಎಂದಿದ್ದಾರೆ ಜೋಶಿ.

ಲೆಕ್ಕರಾಮಯ್ಯ ಅಲ್ಲ ಸಾಲರಾಮಯ್ಯ:

ರಾಜ್ಯ ಸರ್ಕಾರದ ಪ್ರಸಕ್ತ ಬಜೆಟ್ ಅಲ್ಲಿ ₹97,449 ಕೋಟಿ ವಿತ್ತೀಯ ಕೊರತೆ ಮತ್ತು ₹29,957 ಕೋಟಿ ರಾಜಸ್ವ ಸಂಗ್ರಹ ಕೊರತೆ ತೋರಿಸಿರುವ ಸಿಎಂ ಸಿದ್ದರಾಮಯ್ಯ ಅವರು ಲೆಕ್ಕರಾಮಯ್ಯ ಅಲ್ಲ, ಸಂಪದ್ಭರಿತವಾಗಿದ್ದ ಕರುನಾಡಿನ ಪಾಲಿಗೆ ₹1.32 ಲಕ್ಷ ಕೋಟಿ ಸಾಲದ ಹೊರೆ ಹೊರಿಸಿದ "ಸಾಲರಾಮಯ್ಯ" ಆಗಿದ್ದಾರೆಂದು ಜೋಶಿ ಟೀಕಿಸಿದ್ದಾರೆ.

ರಾಜ್ಯದ ಆರ್ಥಿಕಾಭಿವೃದ್ಧಿ ಮತ್ತು ಮೂಲಸೌಲಭ್ಯ ಅಭಿವೃದ್ಧಿಗೆ ಯಾವುದೇ ರಚನಾತ್ಮಕ ಪ್ರಸ್ತಾವನೆಗಳಿಲ್ಲದ ಇದು ರಾಜ್ಯದ ಪಾಲಿಗೆ "ಗ್ಯಾರೆಂಟಿ ಸಾಲ ಶೂಲ"ದ ಬಜೆಟ್ ಆಗಿದೆ. 'ವೋಟ್ ಬ್ಯಾಂಕ್' ಮತ್ತು ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮ ಗಾಂಧಿ ನಾಮಕರಣ ಘೋಷಿಸಿದ 'ಕಾಂಗ್ರೆಸ್ ಹೈ ಕಮಾಂಡ್ ಓಲೈಕೆ'ಯ ಆಯವ್ಯಯ ಎಂದು ಸಚಿವ ಜೋಶಿ ಟೀಕಿಸಿದ್ದಾರೆ.

ಕಳೆದ ವರ್ಷಕ್ಕಿಂತ 40 ಸಾವಿರ ಕೋಟಿ ಬಜೆಟ್ ಗಾತ್ರ ಹೆಚ್ಚಿಸಿದ ಸಿಎಂ, ರಾಜ್ಯ ಜಿಡಿಪಿಯ 2.95ಕ್ಕೆ ಮಿತಿಗೊಳಿಸಿದ್ದರೂ ಒಟ್ಟು ಸಾಲದ ಗಾತ್ರವನ್ನು ₹ 8.24 ಲಕ್ಷ ಕೋಟಿಗೆ ಕೊಂಡೊಯ್ದಿದ್ದಾರೆ. ರಾಜ್ಯದ ಆರ್ಥಿಕ ಇತಿಹಾಸದಲ್ಲೇ ಇದು ದಾಖಲೆ. ಇದೇ ಸಿದ್ದರಾಮಯ್ಯ ಸರ್ಕಾರದ ಸಾಧನೆಯಾಗಿದೆ. ಆದರೆ, ತಮ್ಮ ವಿತ್ತೀಯ ಅಶಿಸ್ತಿನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಅಭ್ಯಾಸಬಲ ಎನ್ನುವಂತೆ ಮತ್ತೆ ಕೇಂದ್ರ ಸರ್ಕಾರದತ್ತ ಬೆರಳು ತೋರಿದ್ದಾರೆ ಎಂದು ಜೋಶಿ ಆರೋಪಿಸಿದ್ದಾರೆ.

ಬಜೆಟ್‌ ಅನ್ನು ಸಮಗ್ರವಾಗಿ ಅವಲೋಕಿಸಿದರೆ ಸಿಎಂ ಅವರ ಸರ್ವ ಸಮಾನತೆ ಸ್ಲೋಗನ್ ಗೆ ತಕ್ಕಂತೆ ಯಾವುದೇ ಅಂತಃಸತ್ವ ಇಲ್ಲವೆಂದೇ ಹೇಳಬೇಕು. ಎಂದಿನಂತೆ ಅಲ್ಪಸಂಖ್ಯಾತರಿಗೆ ವಿಶೇಷ ಕೊಡುಗೆ ಮುಂದುವರೆದಿದೆ ಅಷ್ಟೇ. ಅಲ್ಪಸಂಖ್ಯಾತ ಕಾಲೋನಿಗಳಿಗೆ ಬರೋಬ್ಬರಿ ₹1635 ಕೋಟಿ ಅನುದಾನ ನೀಡಿದ್ದಲ್ಲದೆ, ಅಲ್ಪಸಂಖ್ಯಾತ ನಿಗಮ ಮಂಡಳಿಗಳಲ್ಲಿ ಸಾಲ ಪಡೆದವರ ಸಂಪೂರ್ಣ ಬಡ್ಡಿ ಮನ್ನಾ ಮಾಡಿದೆ. 5000 ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗೆ ₹ 50000 ಘೋಷಿಸಿದೆ. ಹುಬ್ಬಳ್ಳಿ, ಕಲಬುರ್ಗಿಯಲ್ಲಿ ಹಜ್ ಭವನ ನಿರ್ಮಾಣ ಘೋಷಿಸಿದೆ. ಆದರೆ ಬಹುತೇಕ ಸಮಾಜಗಳನ್ನು ಕಡೆಗಣಿಸಿದೆ ಎಂದಿದ್ದಾರೆ.

ದಾವಣಗೆರೆ "ವೋಟ್ ಬ್ಯಾಂಕ್ "ಗೆ ಕೊಡುಗೆ:  ಪ್ರಸಕ್ತ ಬಜೆಟ್ ಅಲ್ಲಿ ವಿಶೇಷವಾಗಿ ಮುಸ್ಲಿಂ ಮತದಾರರೇ ಹೆಚ್ಚಿರುವ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ದೃಷ್ಟಿಯಿಂದ ₹ 100 ಕೋಟಿ ಅನುದಾನ ಘೋಷಿಸಲಾಗಿದೆ ಎಂದು ಆರೋಪಿಸಿರುವ ಪ್ರಹ್ಲಾದ ಜೋಶಿ ಉಳಿದ ಕ್ಷೇತ್ರಗಳಿಗೆ ಏಕಿಲ್ಲ? ಇದು ಅಲ್ಪಸಂಖ್ಯಾತ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ಬಜೆಟ್ ಅಲ್ಲದೇ ಮತ್ತೇನು? ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಕೈ ಬಿಡುವ ಸೂಚನೆಯೇ? ಪ್ರಸಕ್ತ ಬಜೆಟ್ ಅಲ್ಲಿ ತಾವೇ ಘೋಷಿಸಿದ್ದ ಗ್ಯಾರೆಂಟಿ ಯೋಜನೆ "ಯುವ ನಿಧಿ"ಗೆ ಈ ಬಾರಿ ಅನುದಾನವನ್ನೇ ಮೀಸಲಿಟ್ಟಿಲ್ಲ. ಇದು ಕ್ರಮೇಣ ಒಂದೊಂದೇ  ಗ್ಯಾರೆಂಟಿಗಳನ್ನು ಕೈ ಬಿಡುವ ಮುನ್ಸೂಚನೆ ನೀಡಿದಂತಿದೆ. ಯುವ ಸಮುದಾಯವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಕಾರಣ "ಪ್ರಜ್ಞಾವಂತ ಯುವ ಸಮುದಾಯ ತಮ್ಮ ವೋಟ್ ಬ್ಯಾಂಕ್ ಅಲ್ಲ" ಎಂಬ ಸ್ಪಷ್ಟ ಭಾವನೆ ಮೂಡಿದಂತಿದೆ ಈ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಪ್ರಹ್ಲಾದ ಜೋಶಿ ವಿಶ್ಲೇಷಿಸಿದ್ದಾರೆ.

ಇದೊಂದು ಕೇವಲ ಸಾಲದ ಹೊರೆ ಮತ್ತು ವೋಟ್ ಬ್ಯಾಂಕ್ ಪ್ರೇರಿತ ಬಜೆಟ್ ಎಂದು ಪ್ರಹ್ಲಾದ ಜೋಶಿ ಅಭಿಪ್ರಾಯಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.