2026-07-02 11:52:27

VIJAYENDRA | ದೊಡ್ಡ ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಹಜ ಸದಾನಂದ ಗೌಡ ಆಡಿಯೋ ವಿವಾದಕ್ಕೆ ಬಿವೈವಿ ಪ್ರತಿಕ್ರಿಯೆ! | SNK

VIJAYENDRA | ದೊಡ್ಡ ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಹಜ ಸದಾನಂದ ಗೌಡ ಆಡಿಯೋ ವಿವಾದಕ್ಕೆ ಬಿವೈವಿ ಪ್ರತಿಕ್ರಿಯೆ! | SNK

ಮೈಸೂರು: ಬಿಜೆಪಿ ಪಕ್ಷದೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಹಾಗೂ ಗೊಂದಲಗಳು ಈಗ ಸಂಪೂರ್ಣವಾಗಿ ಮುಗಿದಿವೆ. ಕ್ರಾಸ್ ವೋಟಿಂಗ್ ಸೇರಿದಂತೆ ಎಲ್ಲಾ ಪ್ರಮುಖ ವಿದ್ಯಮಾನಗಳ ಕುರಿತು ದೆಹಲಿಯ ವರಿಷ್ಠರಿಗೆ ಸಮಗ್ರ ಮಾಹಿತಿ ನೀಡಲಾಗಿದ್ದು, ಈ ವಿಷಯದ ಬಗ್ಗೆ ಮತ್ತೊಮ್ಮೆ ಸಾರ್ವಜನಿಕವಾಗಿ ಚರ್ಚಿಸುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.  ವಿಜಯೇಂದ್ರ ಮೈಸೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ​ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರದ್ದು ಎನ್ನಲಾದ ವೈರಲ್ ಆಡಿಯೋ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ಆ ಧ್ವನಿ ನನ್ನದಲ್ಲ ಎಂದು ಸ್ವತಃ ಸದಾನಂದಗೌಡರೇ ಸ್ಪಷ್ಟನೆ ನೀಡಿದ್ದಾರೆ ಎಂದರು. ಶಾಸಕ ಎಸ್.ಆರ್. ವಿಶ್ವನಾಥ್ ಅವರೊಂದಿಗೂ ಈ ಬಗ್ಗೆ ಮಾತನಾಡಲಾಗಿದ್ದು, ದೊಡ್ಡ ಪಕ್ಷ ಎಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

​ಇದೇ ವೇಳೆ ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ಸರ್ಕಾರ ತಾನು ಮಾಡಿದ್ದೇ ಸರಿ ಎಂಬ ಹಠಮಾರಿ ಧೋರಣೆ ತಳೆದಿದೆ. ಈ ಯೋಜನೆಗೆ ಶೇ. 79 ರಷ್ಟು ಸ್ಥಳೀಯ ರೈತರ ತೀವ್ರ ವಿರೋಧವಿದ್ದರೂ, ಸರ್ಕಾರ ಯಾವುದೇ ಪ್ರತಿರೋಧವಿಲ್ಲ ಎಂದು ಹಸಿ ಹಸಿ ಸುಳ್ಳು ಹೇಳುತ್ತಿದೆ ಎಂದು ತೀವ್ರವಾಗಿ ಆಕ್ಷೇಪಿಸಿದರು. ​ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೆ ಬಂದ ದಿನದಿಂದಲೂ ಈ ಟೌನ್‌ಶಿಪ್ ಯೋಜನೆ ಜಾರಿಗೆ ತರಲು ತೀವ್ರ ಆತುರ ತೋರುತ್ತಿದ್ದಾರೆ. ಮುಂಬರುವ ಜಂಟಿ ಅಧಿವೇಶನದಲ್ಲಿ ಬಿಜೆಪಿ ಈ ವಿಷಯವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಲಿದ್ದು, ನೊಂದ ರೈತರ ಪರವಾಗಿ ಸರ್ಕಾರದ ವಿರುದ್ಧ ವಿಸ್ತೃತವಾಗಿ ಹೋರಾಟ ನಡೆಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.