ಬೆಂಗಳೂರು : ರಾಜ್ಯ ಬಿಜೆಪಿ ನಾಯಕರ ಕಾರ್ಯವೈಖರಿಯ ಬಗ್ಗೆ ಆರ್‌ಎಸ್‌ಎಸ್ ಪ್ರಮುಖರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ನಾಯಕರಿಗೆ ನಡೆದ ಸಭೆಯಲ್ಲಿ ಸಂಘದ ಮುಖಂಡರು ಖಾರವಾಗಿಯೇ ಮಾತನಾಡಿದ್ದು, ವೈಯಕ್ತಿಕ ಅಸಮಾಧಾನಗಳನ್ನು ಬದಿಗಿಟ್ಟು ಪಕ್ಷ ಸಂಘಟನೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಜಿಬಿಎ, ಎಸ್‌ಐಆರ್ ಹಾಗೂ ಅಡ್ಡ ಮತದಾನದ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ. "ಸರ್ಕಾರ ಜಿಬಿಎ ಚುನಾವಣೆ ನಡೆಸುತ್ತದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಈಗಿನಿಂದಲೇ ಸಮರೋಪಾದಿಯಲ್ಲಿ ಚುನಾವಣಾ ಸಿದ್ಧತೆ ಆರಂಭಿಸಬೇಕು. ವಿಧಾನಸಭೆ ಚುನಾವಣೆಗೆ ಕೇವಲ 16 ತಿಂಗಳು ಮಾತ್ರ ಉಳಿದಿದೆ ಎಂದು ಭಾವಿಸಿ ಕೆಲಸ ಮಾಡಿ" ಎಂದು ಸಂಘದ ಮುಖಂಡರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ, "ಸಿದ್ದರಾಮಯ್ಯ ಹೋಗಿ ಡಿ.ಕೆ. ಶಿವಕುಮಾರ್ ಬಂದರೂ ಅವರನ್ನು ಎದುರಿಸಲು ನಿಮ್ಮ ಸಿದ್ಧತೆ ಸಾಕಾಗುವುದಿಲ್ಲ. ಇಬ್ಬರು ಅಭ್ಯರ್ಥಿಗಳು ಗೆದ್ದಿದ್ದಾರೆ ಎನ್ನುವುದಕ್ಕಿಂತ 4+1 ಅಡ್ಡ ಮತದಾನ ಹೇಗೆ ನಡೆಯಿತು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ" ಎಂದು ಆರ್‌ಎಸ್‌ಎಸ್ ಪ್ರಮುಖರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು, ಪಕ್ಷದ ಆಂತರಿಕ ಗೊಂದಲದಿಂದ ಶಾಸಕರನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳುವಲ್ಲಿ ನಾಯಕತ್ವ ಎಡವಿದೆ ಎಂದು ಆರ್‌ಎಸ್‌ಎಸ್ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದು, ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟನೆ ಬಲಪಡಿಸುವಂತೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.