ಬೆಂಗಳೂರು: ಬೆಂಗಳೂರಿನ ಬ್ರೂಕ್ ಫೀಲ್ಡ್‌ನಲ್ಲಿರುವ ಬೇಬಿ ಕೇರ್ ಸೆಂಟರ್ ನಲ್ಲಿ ಮಕ್ಕಳ ಮೇಲೆ ಕ್ರೌರ್ಯ ಮೆರೆದ ಪ್ರಕರಣದಲ್ಲಿ ಬೇಬಿ ಕೇರ್ ಸೆಂಟರ್ ಬಂದ್ ಮಾಡಿರುವ ಪೊಲೀಸರು ಬೇಬಿ ಕೇರ್ ಸೆಂಟರ್ ಗೆ ಬೀಗ ಹಾಕಿದ್ದಾರೆ. ಬೇಬಿ ಕೇರ್ ಸೆಂಟರ್ ನಲ್ಲಿ ಸಿಬ್ಬಂದಿಗಳು ಕಂದಮ್ಮಗಳನ್ನು ಬಾತ್ ರೂಮ್ ನಲ್ಲಿ ಕೂಡಿ ಹಾಕಿ ದರ್ಪ ಮೆರೆಯುವುದು, ಮಕ್ಕಳ ಮೇಲೆ ನೀರೆರಚಿ ಹಿಂಸಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಕ್ಕಳ ಮೇಲೆ ಹಿಂಸೆ ನೀಡಿರುವ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೆಚ್‌ಎಎಲ್ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಅಲದೇ ಬೇಬಿ ಕೇರ್ ನ ಮೂವರು ಸಿಬ್ಬಂದಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಸಿಬ್ಬಂದಿಗಳು ಪರಾರಿಯಾಗಿದ್ದಾರೆ.
ಇಂದು ಹೆಚ್‌ಎಎಲ್ ಪೊಲೀಸರು ಬೇಬಿ ಕೇರ್ ಸೆಂಟರ್ ನಲ್ಲಿ ಸ್ಥಳ ಮಹಜರು ನಡೆಸಿ, ಬಳಿಕ ಬೇಬಿ ಕೇರ್ ಗೆ ಬೀಗ ಹಾಕಿ ಬಂದ್ ಮಾಡಿದ್ದಾರೆ. ಬೇಬಿಕೇರ್ ಮೈಂಟೇನೆನ್ಸ್ ಹಾಗೂ ಕಂಪನಿ ಅಡ್ಮಿನ್ ಡಿಪಾರ್ಟ್ಮೆಂಟ್‌ಗೂ ನೋಟಿಸ್ ನೀಡಲು ಸಿದ್ದತೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ವೈರಲ್ ಆಗಿರುವ ವಿಡಿಯೋ ಹಳೆಯ ವಿಡಿಯೋ ಎಂದು ತಿಳಿದುಬಂದಿದೆ. CAPGEMINI TECHNOLOGY SERVICES ಕಂಪನಿ ಉದ್ಯೋಗಿಗಳಿಗಾಗಿಯೇ ಈ ಬೇಬಿಕೇರ್‌ನ ತೆರಯಲಾಗಿದ್ದು, ಅಲ್ಲಿನ ಕೆಲಸಗಾರರು ಮಕ್ಕಳನ್ನ ಬೇಬಿಕೇರ್‌ನಲ್ಲಿ ಬಿಟ್ಟು ಹೋಗುತ್ತಿದ್ದರು. ಕೆಲಸ ಮುಗಿಸಿಕೊಂಡು ಹೋಗುವಾಗ ಮಕ್ಕಳನ್ನ ವಾಪಸ್ ಕರೆದೊಯ್ಯುತ್ತಿದ್ದರು ಅನ್ನೋದು ಗೊತ್ತಾಗಿದೆ.
ಬೇಬಿ ಕೇರ್‌ನಲ್ಲಿ ಕೆಲಸ ಮಾಡೋ ಸಿಬ್ಬಂದಿಯನ್ನು ಕಂಪನಿಯವರೇ ನಿಯೋಜನೆ ಮಾಡಿದ್ದಾರೆ. ಸದ್ಯ 18 ಮಕ್ಕಳು ಬೇಬಿಕೇರ್‌ನಲ್ಲಿ ಇರುತ್ತಿದ್ದು, ಮಕ್ಕಳ ಮೇಲೆ ದೈಹಿಕ ಹಿಂಸೆ ವಿಡಿಯೋ ವೈರಲ್ ಆದ ನಂತರ ಬೇರೆ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಆದರೆ ಇದೀಗ ಇಡೀ ಬೇಬಿ ಕೇರ್ ಸೆಂಟ್ ನ್ನು ಪೊಲಿಸರು ಬಂದ್ ಮಾಡಿ, ಬೀಗ ಜಡಿದಿದ್ದಾರೆ. ಬ್ರೂಕ್ ಫೀಲ್ಡ್‌ನಲ್ಲಿರುವ ಬೇಬಿ ಕೇರ್ ಸೆಂಟರ್‌ನಲ್ಲಿ ಮಕ್ಕಳ ಮೇಲೆ ಕ್ರೌರ್ಯ ಎಸಗಲಾಗಿತ್ತು. ಇದನ್ನು ತಿಳಿದ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮಕ್ಕಳ ಮೇಲೆ ಆಯಾಗಳು ಕ್ರೌರ್ಯ ಮೆರೆದಿರುವ ವೀಡಿಯೋ ಪರಿಶೀಲನೆ ಮಾಡಿ, ಐವರು ಆಯಾಗಳ ಮೇಲೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರನ್ವಯ ಮಂಜುಳ, ವಿಜಯಲಕ್ಷ್ಮೀ, ಭವಾನಿ, ಸಿಂಧು, ಬಿಂದು ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.