ತಿರುಮಲಕ್ಕೆ ಹೋಗುವ ಶ್ರೀವಾರಿ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿಯು ಪ್ರಮುಖ ಸೂಚನೆಯೊಂದನ್ನು ನೀಡಿದೆ. ಇನ್ಮುಂದೆ ತಿರುಮಲ ಘಾಟ್ ರಸ್ತೆ ಹಾಗೂ ಬೆಟ್ಟದ ಮೇಲಿನ ರಸ್ತೆಗಳಲ್ಲಿ ಅನಗತ್ಯವಾಗಿ ಹಾರ್ನ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ತಿರುಮಲದ ಆಧ್ಯಾತ್ಮಿಕ ವಾತಾವರಣವನ್ನು ಕಾಪಾಡುವ ಹಾಗೂ ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಟಿಟಿಡಿ “ಸೈಲೆಂಟ್ ತಿರುಮಲ ಇನಿಶಿಯೇಟಿವ್” ಎಂಬ ವಿಶೇಷ ಅಭಿಯಾನ ಆರಂಭಿಸಿದೆ. ತಿರುಮಲದಲ್ಲಿ ಗೋವಿಂದ ನಾಮಸ್ಮರಣೆ ಮಾತ್ರ ಕೇಳಿಬರಬೇಕು ಎಂಬ ಆಶಯದೊಂದಿಗೆ ಈ ನಿಯಮ ಜಾರಿಗೆ ತರಲಾಗಿದೆ.
ಭಕ್ತರಿಗೆ ಮಾಹಿತಿ ನೀಡುವ ಸಲುವಾಗಿ ತಿರುಮಲಕ್ಕೆ ಹೋಗುವ ಪ್ರಮುಖ ಮಾರ್ಗಗಳಲ್ಲಿ ಹಾಗೂ ಬೆಟ್ಟದ ಮೇಲಿನ ರಸ್ತೆಗಳಲ್ಲಿ ವಿಶೇಷ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ವಾಹನ ಚಾಲಕರು ಯಾವುದೇ ಕಾರಣಕ್ಕೂ ಹಾರ್ನ್ ಮಾಡುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಈ ನಿಯಮ ಸಾಮಾನ್ಯ ಭಕ್ತರ ವಾಹನಗಳಿಗೆ ಮಾತ್ರವಲ್ಲ, ವಿಐಪಿ ವಾಹನಗಳಿಗೂ ಅನ್ವಯವಾಗಲಿದೆ. ಸೈರನ್ ಅಳವಡಿಸಿರುವ ಸರ್ಕಾರಿ ಹಾಗೂ ವಿಐಪಿ ವಾಹನಗಳು ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಹಾರ್ನ್ ಅಥವಾ ಸೈರನ್ ಬಳಸಲು ಅವಕಾಶವಿದ್ದು, ಉಳಿದ ಸಂದರ್ಭಗಳಲ್ಲಿ ಕಡ್ಡಾಯವಾಗಿ ಹಾರ್ನ್ ಆಫ್ ಮಾಡಿರಬೇಕು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ತಿರುಮಲಕ್ಕೆ ಆಗಮಿಸುವ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹಿಂದೆ ಪ್ರತಿದಿನ ಸುಮಾರು 8 ಸಾವಿರ ವಾಹನಗಳು ಬರುತ್ತಿದ್ದರೆ, ಇದೀಗ ದಿನಕ್ಕೆ 10 ಸಾವಿರಕ್ಕೂ ಹೆಚ್ಚು ವಾಹನಗಳು ಬೆಟ್ಟ ಏರುತ್ತಿವೆ. ವಾರಾಂತ್ಯ, ಹಬ್ಬ ಹಾಗೂ ರಜಾ ದಿನಗಳಲ್ಲಿ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತಿದ್ದು, ಶಬ್ದ ಮಾಲಿನ್ಯವೂ ಹೆಚ್ಚಾಗುತ್ತಿದೆ.
ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ನಿಶ್ಯಬ್ದ ವಲಯವಾಗಿ ಪರಿಗಣಿಸಲಾಗಿದ್ದು, ಹಗಲಿನಲ್ಲಿ 50 ಡೆಸಿಬಲ್ ಹಾಗೂ ರಾತ್ರಿ 40 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಉಂಟುಮಾಡುವಂತಿಲ್ಲ. ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಹಾರ್ನ್ ಅಥವಾ ಸೈರನ್ ಬಳಸಿದರೆ ಟಿಟಿಡಿ ಜಾಗೃತ ದಳ ಹಾಗೂ ಸಂಚಾರಿ ಪೊಲೀಸರು ದಂಡ ವಿಧಿಸಲಿದ್ದಾರೆ. ಆದ್ದರಿಂದ, ತಿರುಮಲಕ್ಕೆ ಪ್ರಯಾಣಿಸುವ ಮುನ್ನ ಈ ನಿಯಮವನ್ನು ನೆನಪಿನಲ್ಲಿಟ್ಟುಕೊಳ್ಳಿ.