ಒಂದಡೆ 'ಟಾಕ್ಸಿಕ್' ಸಿನಿಮಾ ಕೆಲಸಗಳಲ್ಲಿ ನಟ ಯಶ್ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ 'ರಾಮಾಯಣ' ಚಿತ್ರದ ಟೀಸರ್ ಬಿಡುಗಡೆಗೆ ಸಿದ್ಧತೆ ನಡೀತಿದೆ. ರಾಮನವಮಿ ಸಂಭ್ರಮದಲ್ಲಿ ಅದ್ಧೂರಿ ಕಾರ್ಯಕ್ರಮದಲ್ಲಿ ಟೀಸರ್ ರಿಲೀಸ್ ಮಾಡುತ್ತಾರೆ ಎನ್ನಲಾಗ್ತಿದೆ.ಇದೆಲ್ಲದರ ನಡುವೆ ಚಿತ್ರದಲ್ಲಿ ವಿಜಯ್ ಸೇತುಪತಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಸಾವಿರಾರು ಕೋಟಿ ರೂ. ಬಂಡವಾಳದಲ್ಲಿ ನಿರ್ಮಾಣವಾಗ್ತಿದೆ. ಎರಡು ಭಾಗಗಳಾಗಿ ಚಿತ್ರವನ್ನು ತೆರೆಗೆ ತರಲಾಗಿದೆ. ವಾಲ್ಮೀಕಿ ಬರೆದ ರಾಮಾಯಣ ಕಾವ್ಯ ಆಧರಿಸಿ ಚಿತ್ರ ನಿರ್ಮಿಸಲಾಗ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸಿದ್ದಾರೆ. ಈ ರ್ಷ ದೀಪಾವಳಿ ಸಂಭ್ರಮದಲ್ಲಿ ಮೊದಲ ಭಾಗ ತೆರೆಗೆ ಬರಲಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.ಲಕ್ಷ್ಮಣನಾಗಿ ರವಿ ದುಬೆ, ಮಂಡೋದರಿಯಾಗಿ ಕಾಜಲ್ ಅಗರ್‌ವಾಲ್, ಶೂರ್ಪನಖ ಆಗಿ ರಕುಲ್ ಪ್ರೀತ್ ಸಿಂಗ್, ಕೈಕೇಯಿ ಆಗಿ ಲಾರಾ ದತ್ತಾ, ದಶರಥನಾಗಿ ಅರುಣ್ ಗೋವಿಲ್ ನಟಿಸಿರುವುದು ಪಕ್ಕಾ ಆಗಿದೆ. ಇನ್ನು ರಾವಣನದ ತಮ್ಮ ವಿಭೀಷಣ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸುತ್ತಾರೆ ಎಂದು ಗುಲ್ಲಾಗಿತ್ತು. ಈ ಬಗ್ಗೆ ಸ್ವತಃ ಸೇತುಪತಿ ಮಾತನಾಡಿ ಅದೆಲ್ಲಾ ಕೇವಲ ವದಂತಿ ಮಾತ್ರ ಎಂದು ಸ್ಪಷ್ಟನೆ ನೀಡಿದ್ದಾರೆ.
"ಇಲ್ಲ ನಾನು ರಾಮಾಯಣ ಚಿತ್ರದಲ್ಲಿ ನಟಿಸುತ್ತಿಲ್ಲ. ಇಂತಹ ವದಂತಿ ಹೇಗೆ ಹರಡುತ್ತದೆ ಎನ್ನುವುದು ಗೊತ್ತಿಲ್ಲ" ಎಂದು ವಿಜಯ್ ಸೇತುಪತಿ ಸ್ಪಷ್ಟನೆ ನೀಡಿರುವುದಾಗಿ ಬಾಲಿವುಡ್ ಹಂಗಾಮಾ ವೆಬ್ ಸೈಟ್ ವರದಿ ಮಾಡಿದೆ. ಇತ್ತೀಚೆಗೆ ವಿಕ್ರಾಂತ್ ಮೆಸ್ಸಿ ಕೂಡ ನಾನು 'ರಾಮಾಯಣ' ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು.ರಾವಣನ ಮಗ ಇಂದ್ರಜಿತ್ ಪಾತ್ರದಲ್ಲಿ ವಿಕ್ರಾಂತ್ ಮೆಸ್ಸಿ ನಟಿಸುತ್ತಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಸ್ವತಃ ವಿಕ್ರಾಂತ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದರು. ನಾನು ರಾಮಾಯಣ ಚಿತ್ರದಲ್ಲಿ ನಟಿಸುತ್ತಿಲ್ಲ, ಇಂತಹ ಸುದ್ದಿ ಹೇಗೆ ಹರಡುತ್ತದೆ ಎಂದು ಗೊತ್ತಿಲ್ಲ ಎಂದಿದ್ದರು. ನಿಮಿತ್ ಮತ್ರಾ ಜೊತೆ ಸೇರಿ ಯಶ್ 'ರಾಮಾಯಣ' ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
'ಚಿಲ್ಲರ್ ಪಾರ್ಟಿ', 'ದಂಗಲ್', 'ಚಿಚೊರೆ' ರೀತಿಯ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟಿರುವ ನಿತೇಶ್ 'ರಾಮಾಯಣ' ಸಿನಿಮಾ ಮಾಡ್ತಾರೆ ಎಂದಾಗಲೇ ನಿರೀಕ್ಷೆ ಗರಿಗೆದರಿತ್ತು. ರಣ್‌ಬೀರ್, ಯಶ್ ಚಿತ್ರದ ಭಾಗವಾಗಿರುವುದು ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಸಾಕಷ್ಟು ಬಾರಿ ಕೇಳಿರುವ, ನೋಡಿರುವ ಕಥೆಯನ್ನು ಯಾವ ರೀತಿ ತೆರೆಗೆ ತರುತ್ತಾರೆ ಎನ್ನುವ ಕುತೂಹಲ ಜನರಲ್ಲಿದೆ. ಇವತ್ತಿನ ಆಧುನಿಕ ತಂತ್ರಜ್ಞಾನ ಬಳಸಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಮುಂದಾಗಿದೆ.
ವಿಜಯ್ ಸೇತುಪತಿ ಈಗಾಗಲೇ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಸೈರಾ ನರಸಿಂಹ ರೆಡ್ಡಿ' ರೀತಿಯ ಐತಿಹಾಸಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಗೆದ್ದಿದ್ದಾರೆ. ಸೇತುಪತಿ ನಟನೆಯ 'ಗಾಂಧಿ ಕ್ಲಾಸ್' ಸಿನಿಮಾ ಬಿಡುಗಡೆಯಾಗಿದೆ. ಕಳೆದ ವರ್ಷ 'ತಲೈವನ್ ತಲೈವಿ' ರೀತಿಯ ಹಿಟ್ ಸಿನಿಮಾ ಕೊಟ್ಟಿದ್ದರು.
ರಜನಿಕಾಂತ್ ಜೊತೆ 'ಜೈಲರ್'-2 ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಸ್ವತಃ ವಿಜಯ್ ಸೇತುಪತಿ ಇತ್ತೀಚೆಗೆ ಖಚಿತಪಡಿಸಿದ್ದರು. 'ಕಾದಲ್ ಕಾದಲೈ ಸೊಲ್ಲವ', 'ಟ್ರೈನ್', 'ಸಮ್ ಡಾಗ್: 33 ಟೆಂಪಲ್ ರೋಡ್', ಅರಸನ್' ಹೀಗೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ಇತ್ತೀಚೆಗೆ ತಮಿಳು ಬಿಗ್‌ಬಾಸ್ ಸೀಸನ್ 9 ಶೋ ನಿರೂಪಣೆ ಮಾಡಿ ಗೆದ್ದಿದ್ದಾರೆ.