2026-03-07 02:27:24

Vacant teaching posts in universities | ವಿವಿಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ಹಂತ ಹಂತವಾಗಿ ನೇಮಕ ಸಿಎಂ ಸಿದ್ದರಾಮಯ್ಯ | Speed News Kannada

Vacant teaching posts in universities | ವಿವಿಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ಹಂತ ಹಂತವಾಗಿ ನೇಮಕ ಸಿಎಂ ಸಿದ್ದರಾಮಯ್ಯ | Speed News Kannada

ಬೆಂಗಳೂರು: ಪಠ್ಯಕ್ರಮವು ಪ್ರಸ್ತುತ ಮತ್ತು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಮತ್ತು ಮಷೀನ್ ಲರ್ನಿಂಗ್ ನಂತಹ ಭವಿಷ್ಯದ ಕ್ಷೇತ್ರಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು ಇಂದಿನ ಅತ್ಯಗತ್ಯವಾಗಿದೆ. ಆದರೆ, AI ಬಳಕೆಯು ನೀತಿಶಾಸ್ತ್ರ, ದತ್ತಾಂಶ ರಕ್ಷಣೆ ಮತ್ತು ಜವಾಬ್ದಾರಿಯುತ ಬಳಕೆಯನ್ನು ಒಳಗೊಂಡಿರಬೇಕು. ಉನ್ನತ ಶಿಕ್ಷಣವು ಕೇವಲ ತಂತ್ರಜ್ಞರನ್ನು ಮಾತ್ರವಲ್ಲದೆ, ಸಾಮಾಜಿಕ ಜವಾಬ್ದಾರಿಯುತ ನಾಗರಿಕರನ್ನು ರೂಪಿಸಬೇಕು. ಉಪಕುಲಪತಿಗಳು ಶೈಕ್ಷಣಿಕ ಶ್ರೇಷ್ಠತೆ, ಪಾರದರ್ಶಕ ಆಡಳಿತ, ಪಠ್ಯಕ್ರಮದ ನಾವೀನ್ಯತೆ, ವಿದ್ಯಾರ್ಥಿ ಕಲ್ಯಾಣ ಮತ್ತು ನೈತಿಕ ಅಭ್ಯಾಸಗಳೆಂಬ ಐದು ಪ್ರಮುಖ ಆದ್ಯತೆಗಳ ಮೇಲೆ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಕರೆ ನೀಡಿದ್ದಾರೆ.
ಲೋಕ ಭವನ, ಕರ್ನಾಟಕ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಉನ್ನತ ಶಿಕ್ಷಣ ಮಂಡಳಿ ವತಿಯಿಂದ ಆಯೋಜಿಸಿದ್ದ ವಿಶ್ವವಿದ್ಯಾಲಯಗಳ “ಉಪ ಕುಲಪತಿಗಳ ಸಮ್ಮೇಳನ – 2026 ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ 94 ವಿಶ್ವವಿದ್ಯಾಲಯಗಳಿವೆ. ಇವುಗಳಲ್ಲಿ 32 ಪಬ್ಲಿಕ್ ವಿಶ್ವವಿದ್ಯಾಲಯಗಳಿವೆ. ಸುಮಾರು 27.40 ಲಕ್ಷ ಮಕ್ಕಳು ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ಇದರಲ್ಲಿ 2024-25ನೇ ಸಾಲಿಗೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ವಿಶ್ವ ವಿದ್ಯಾಲಯಗಳಡಿಲ್ಲಿ 14.60 ಲಕ್ಷ ಸಂಖ್ಯೆಯ ಮಕ್ಕಳು ಕಲಿಯುತ್ತಿದ್ದಾರೆ. ರಾಜ್ಯದ ಸಂಖ್ಯೆಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಬಾಲಕಿಯರ ದಾಖಲಾತಿ ಬಾಲಕರಿಗಿಂತ ಹೆಚ್ಚಾಗಿದೆ. ರಾಜ್ಯದಲ್ಲಿ ಒಟ್ಟು ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಹುಡುಗಿಯರು 51% ರಷ್ಟಿದ್ದಾರೆ ಹಾಗೂ ಸುಮಾರು 81% ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಬಂದವರು ಎಂದರು.
ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಶೇ. 60-70 ರಷ್ಟು ಶಿಕ್ಷಕರ ಹುದ್ದೆಗಳು ಖಾಲಿಯಿರುವುದು ಗಮನದಲ್ಲಿದೆ. ಈ ಹಿನ್ನೆಲೆಯಲ್ಲಿ ನಾವು ಸರ್ಕಾರಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಖಾಲಿಯಿರುವ 2000 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಇಂದು ಉನ್ನತ ಶಿಕ್ಷಣವು ತಾಂತ್ರಿಕ ಬದಲಾವಣೆ ಮತ್ತು ಜಾಗತಿಕ ಸ್ಪರ್ಧೆಯ ಮಟ್ಟದಲ್ಲಿದೆ. ನಮ್ಮ ಸಂಸ್ಥೆಗಳು ಕೇವಲ ಪದವಿ ನೀಡುವುದನ್ನು ಗುರಿಯನ್ನಾಗಿಟ್ಟುಕೊಳ್ಳಬಾರದು. ಕಲಿಕೆಯಲ್ಲಿ ನಾವೀನ್ಯತೆ, ವಿಮರ್ಶಾತ್ಮಕ ಚಿಂತನೆ ಮತ್ತು ಉದ್ಯೋಗಾವಕಾಶವನ್ನು ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ನಾವು, ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ಬೆಂಬಲದೊಂದಿಗೆ ರೂ. 2,500 ಕೋಟಿ ವೆಚ್ಚದ "ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ"ಯನ್ನು ಜಾರಿಗೆ ತರುತ್ತಿದ್ದೇವೆ. ಇದು ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ಸಂಶೋಧನೆಗೆ ಉತ್ತೇಜನ ನೀಡುತ್ತದೆ ಎಂದು ಹೇಳಿದರು.
ಉನ್ನತ ಶಿಕ್ಷಣವನ್ನು ಬಲಪಡಿಸಲು 2025ರಿಂದ ಮುಂದಿನ ನಾಲ್ಕು ವರ್ಷಗಳಿಗಾಗಿ 2,500 ಕೋಟಿ ರೂಪಾಯಿಗಳ ಬೃಹತ್ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಮೈಸೂರನ್ನು 2030ರ ವೇಳೆಗೆ ‘ಜಾಗತಿಕ ಶಿಕ್ಷಣ ಮತ್ತು ನಾವೀನ್ಯತಾ ಹಬ್' ಹಾಗೂ ‘ರಾಷ್ಟ್ರೀಯ ಜ್ಞಾನ ಜಿಲ್ಲೆ'ಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದರು.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ ಸುಧಾಕರ್ ಹಾಜರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.