2026-06-29 12:06:29

UT KHADER | ಇಂದು ಚಪ್ಪಲಿ ಎಸೆದವರೇ ನಾಳೆ ಹಾರ ಹಾಕ್ತಾರೆ: ಸಚಿವ ಯು ಟಿ ಖಾದರ್ | SNK

UT KHADER | ಇಂದು ಚಪ್ಪಲಿ ಎಸೆದವರೇ ನಾಳೆ ಹಾರ ಹಾಕ್ತಾರೆ: ಸಚಿವ ಯು ಟಿ ಖಾದರ್ | SNK

ಬೆಂಗಳೂರು: ಕೆಂಪೇಗೌಡ ದಿನಾಚರಣೆ ಸಮಾರಂಭದ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಕಾರಿನ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆಯಲು ಯತ್ನಿಸಿದ ಪ್ರಕರಣ ಇಡೀ ರಾಜಕಾರಣದಲ್ಲಿ ಚರ್ಚೆಗೆ ಈಡಾಗಿದೆ. ಈ ಸಂಘರ್ಷದ ಕುರಿತು ಆಕ್ರೋಶ ಹೊರಹಾಕಿರುವ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್, ವಿರೋಧ ಪಕ್ಷಗಳು ರಾಜಕೀಯ ಮಾಡುವುದಿದ್ದರೆ ಸೈದ್ಧಾಂತಿಕವಾಗಿ ಮಾಡಲಿ, ಅದನ್ನು ಬಿಟ್ಟು ಕಾಲಿಗೆ ಹಾಕುವ ಚಪ್ಪಲಿ ಹಿಡಿದು ಇಂತಹ ಕೀಳುಮಟ್ಟದ ರಾಜಕೀಯ ಮಾಡಬಾರದು ಎಂದು ಕಿಡಿಕಾರಿದ್ದಾರೆ.

ದ್ವೇಷದ ರಾಜಕೀಯವನ್ನು ರಾಜ್ಯದ ಜನ ಒಪ್ಪಲ್ಲ!
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್ ಅವರು, ಪ್ರದೀಪ್ ಈಶ್ವರ್ ಅವರ ಕಾರಿನ ಮೇಲಿನ ಚಪ್ಪಲಿ ಎಸೆತದ ಕೃತ್ಯವನ್ನು ನಾನು ಖಂಡಿಸಿದರು. ಈ ಕೀಳು ಮಟ್ಟದ ದಾಳಿ ನಡೆಸಿದ ಕಿಡಿಗೇಡಿಗಳು ಯಾರಿದ್ದಾರೋ, ಅವರೇ ಸ್ವತಃ ಮುಂದೆ ಒಂದು ದಿನ ಪ್ರದೀಪ್ ಈಶ್ವರ್ ಅವರ ಬಳಿ ಬಂದು ಶಲ್ಯ ಹೊದಿಸಿ, ಹಾರ ಹಾಕಿ ಅಭಿನಂದಿಸುವ ಕಾಲ ಖಂಡಿತ ಬಂದೇ ಬರುತ್ತೆ ಎಂದು ಭವಿಷ್ಯ ನುಡಿದರು.

ಮುಂದುವರಿದು ಜೆಡಿಎಸ್-ಬಿಜೆಪಿ ಕಾರ್ಯಕರ್ತರ ವಿರುದ್ಧ ಹರಿಹಾಯ್ದ ಸಚಿವರು, ಎಚ್.ಡಿ. ದೇವೇಗೌಡರು ಈ ದೇಶದ ಪ್ರಧಾನಿಯಾದಾಗ ನಾವೆಲ್ಲರೂ ಪಕ್ಷ ಭೇದ ಮರೆತು ತುಂಬ ಹೆಮ್ಮೆ ಪಟ್ಟಿದ್ದೆವು. ಇತ್ತೀಚೆಗಷ್ಟೇ ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ಖುದ್ದಾಗಿ ದೇವೇಗೌಡರ ನಿವಾಸಕ್ಕೆ ತೆರಳಿ, ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಹಿರಿಯರ ಮೇಲೆ ಅಷ್ಟೊಂದು ಗೌರವವಿದೆ. ಆದರೆ, ಅವರ (ಜೆಡಿಎಸ್) ಪಕ್ಷದ ಕೆಲವು ಕಾರ್ಯಕರ್ತರು ಇಂದು ಕಾಲಿಗೆ ಹಾಕುವ ಚಪ್ಪಲಿಯನ್ನು ಹಿಡಿದು ಬೀದಿ ರಾಜಕೀಯ ಮಾಡುತ್ತಿದ್ದಾರೆ. ಇಂತಹ ದ್ವೇಷದ ಮತ್ತು ವಿಕೃತ ರಾಜಕಾರಣವನ್ನು ಕರ್ನಾಟಕದ ಪ್ರಜ್ಞಾವಂತ ಜನತೆ ಎಂದಿಗೂ ಒಪ್ಪುವುದಿಲ್ಲ. ಇಡೀ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಶಾಸಕ ಪ್ರದೀಪ್ ಈಶ್ವರ್ ಅವರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಚಪ್ಪಲಿ ಎಸೆಯುವುದು ದೊಡ್ಡದಲ್ಲ, ಕ್ಷಮಿಸುವ ಗುಣ ನಮ್ಮದು!
ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ಎತ್ತಿಹಿಡಿದ ಸಚಿವರು, ಚಪ್ಪಲಿ ಎಸೆದ ಕಿಡಿಗೇಡಿಗಳಿಗೆ ರಾಜ್ಯದ ಜನತೆಯೇ ಮುಂದಿನ ದಿನಗಳಲ್ಲಿ ಸೂಕ್ತ ಪಾಠ ಕಲಿಸಲಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿ ನಮಗೆ ಒಳ್ಳೆಯದನ್ನು ಕಲಿಸಿದೆ. ಯಾರೋ ಒಬ್ಬ ನಮ್ಮ ಮೇಲೆ ಚಪ್ಪಲಿ ಎಸೆದಾಗ, ವಾಪಸ್ ಅವನ ಮೇಲಕ್ಕೆ ಚಪ್ಪಲಿ ಎಸೆಯುವುದು ದೊಡ್ಡ ಸಾಧನೆಯೇನಲ್ಲ, ಆ ಕೆಲಸವನ್ನು ಒಂದು ಸಣ್ಣ ಮಗು ಕೂಡ ಮಾಡುತ್ತದೆ. ಆದರೆ, ಚಪ್ಪಲಿ ಎಸೆದವರನ್ನು ನೋಡಿಯೂ ಆವೇಶಕ್ಕೆ ಒಳಗಾಗದೆ, ನಿನಗೆ ಆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಹಾರೈಸಿ ಅಲ್ಲಿಂದ ಮುಗುಳ್ನಕ್ಕು ಹೋಗುವಂತಹ ಅತ್ಯಂತ ದೊಡ್ಡ ಗುಣ ಮತ್ತು ತಾಳ್ಮೆ ಶಾಸಕ ಪ್ರದೀಪ್ ಈಶ್ವರ್ ಅವರಿಗಿದೆ. ಇಂತಹ ಯುವ ನಾಯಕನಿಗೆ ಒಳ್ಳೆಯ ಕೆಲಸ ಮಾಡಲು ನಮ್ಮ ಸರ್ಕಾರ ಸದಾ ಉತ್ತೇಜನ ನೀಡಲಿದ್ದು, ಅವರ ಪ್ರತಿಯೊಂದು ಹೋರಾಟದಲ್ಲೂ ನಾವೆಲ್ಲ ಜೊತೆಯಾಗಿ ಇರುತ್ತೇವೆ ಎಂದು ಯು.ಟಿ. ಖಾದರ್ ಸ್ಪಷ್ಟಪಡಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.