2026-06-28 04:02:25

SONIA GANDHI | ಗಾಜಾ ಸಂಘರ್ಷದ ಭಾರತದ ಮೌನ ಸೋನಿಯಾ ಗಾಂಧಿ ಟೀಕೆಗೆ ಬಿಜೆಪಿ ತಿರುಗೇಟು! | SNK

SONIA GANDHI | ಗಾಜಾ ಸಂಘರ್ಷದ ಭಾರತದ ಮೌನ ಸೋನಿಯಾ ಗಾಂಧಿ ಟೀಕೆಗೆ ಬಿಜೆಪಿ ತಿರುಗೇಟು! | SNK

ನವದೆಹಲಿ: ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಕೇಂದ್ರ ಸರ್ಕಾರದ "ಮೌನ"ವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬರೆದಿರುವ ಲೇಖನವೊಂದು ದೇಶಿ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.  ಪ್ಯಾಲೆಸ್ತೀನ್ ಹಕ್ಕುಗಳ ಪರವಾಗಿದ್ದ ತನ್ನ ಐತಿಹಾಸಿಕ ನಿಲುವಿಗಿಂತ, ಇಸ್ರೇಲ್ ಜೊತೆಗಿನ ನಿಕಟ ಸಂಬಂಧಕ್ಕೇ ಭಾರತ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಸೋನಿಯಾ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆಡಳಿತಾರೂಢ ಬಿಜೆಪಿ, ರಾಜ್ಯಸಭಾ ಸಂಸದೆಯೂ ಆಗಿರುವ ಸೋನಿಯಾ ಗಾಂಧಿ ಅವರು ದೇಶದ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಮತ್ತು ವಿದೇಶಾಂಗ ನೀತಿಯಲ್ಲೂ "ವೋಟ್ ಬ್ಯಾಂಕ್" ರಾಜಕಾರಣ ಮಾಡಲು ಯತ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.

'ಮೌನದ ಏಕೈಕ ಧ್ವನಿ ಭಾರತ' - ಸೋನಿಯಾ ಗಾಂಧಿ ಆಕ್ರೋಶ ಪತ್ರಿಕೆಯೊಂದರಲ್ಲಿ ಬರೆದ ಲೇಖನದಲ್ಲಿ ಸೋನಿಯಾ ಗಾಂಧಿ ಅವರು ವಿಶ್ವಸಂಸ್ಥೆಯ ಸ್ವತಂತ್ರ ಅಂತರರಾಷ್ಟ್ರೀಯ ತನಿಖಾ ಆಯೋಗದ ವರದಿಯನ್ನು ಉಲ್ಲೇಖಿಸಿದ್ದಾರೆ. "ಗಾಜಾದಲ್ಲಿ ಪ್ಯಾಲೆಸ್ತೀನಿಯರ ವಿರುದ್ಧ ಇಸ್ರೇಲ್ ಜನಾಂಗೀಯ ಹತ್ಯೆ ನಡೆಸಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಈ ಸಂಘರ್ಷದಲ್ಲಿ 20,000 ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದು, 44,000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಅಂತರರಾಷ್ಟ್ರೀಯ ಸಮುದಾಯದ ನಿಷ್ಕ್ರಿಯತೆಯನ್ನು ಟೀಕಿಸಿರುವ ಅವರು, "ಕೇಂದ್ರ ಸರ್ಕಾರವು ಗಾಜಾ ವಿಷಯದಲ್ಲಿ ಬಹುಮಟ್ಟಿಗೆ ಮೌನ ವಹಿಸಿದೆ ಮತ್ತು ನಾಗರಿಕರ ಸಂಕಷ್ಟದ ವಿರುದ್ಧ ಬಲವಾಗಿ ಧ್ವನಿ ಎತ್ತುತ್ತಿಲ್ಲ. ಭಾರತದ ಈ ಮೌನವು ನೈತಿಕವಾಗಿ ಖಂಡನೀಯ ಮಾತ್ರವಲ್ಲದೆ, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದಲೂ ಅರ್ಥಹೀನವಾಗಿದೆ" ಎಂದು ಲೇಖನದಲ್ಲಿ ಬರೆದಿದ್ದಾರೆ. ಅಲ್ಲದೆ, ಪ್ಯಾಲೆಸ್ತೀನ್ ಪರವಾಗಿದ್ದ ಐತಿಹಾಸಿಕ ನಿಲುವಿನಿಂದ ದೂರ ಸರಿಯುವುದರಿಂದ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ವಿದೇಶಾಂಗ ನೀತಿಯಲ್ಲೂ ವೋಟ್ ಬ್ಯಾಂಕ್ ರಾಜಕಾರಣ: ಬಿಜೆಪಿ ತಿರುಗೇಟು ಸೋನಿಯಾ ಗಾಂಧಿ ಅವರ ಈ ಲೇಖನಕ್ಕೆ ಕೌಂಟರ್ ನೀಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, "ಕಾಂಗ್ರೆಸ್ ಪಕ್ಷವು ವಿದೇಶಾಂಗ ನೀತಿಯ ವಿಷಯದಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಭಾರತವು ಗಾಜಾ ಮತ್ತು ಪ್ಯಾಲೆಸ್ತೀನ್ ವಿಷಯದಲ್ಲಿ ತನ್ನ ನಿಲುವನ್ನು ಹಲವು ಬಾರಿ ಸ್ಪಷ್ಟಪಡಿಸಿದೆ ಹಾಗೂ ಅಲ್ಲಿಗೆ ಮಾನವೀಯ ನೆರವನ್ನು ಸಹ ಕಳುಹಿಸಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

"ವಿಶ್ವಸಂಸ್ಥೆಯಲ್ಲಿ ಕದನ ವಿರಾಮದ ನಿರ್ಣಯಗಳ ಪರವಾಗಿ ಮತ ಚಲಾಯಿಸುವ ಮೂಲಕ ಭಾರತ ತನ್ನ ನಿಲುವನ್ನು ತೋರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ಯಾಲೆಸ್ತೀನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಕೂಡ ಲಭಿಸಿದೆ. ಆದರೆ ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್‌ಗಾಗಿ ಇಸ್ರೇಲ್ ಜೊತೆಗೆ ಎಂದಿಗೂ ಉತ್ತಮ ಸಂಬಂಧವನ್ನು ಬೆಳೆಸಲಿಲ್ಲ. ಕಾಂಗ್ರೆಸ್‌ಗೆ ಹಮಾಸ್ ಉಗ್ರರ ಮೇಲೆ ಸಹಾನುಭೂತಿ ಇದೆಯೇ ಹೊರತು ಇಸ್ರೇಲ್ ಮೇಲಿನ ದಾಳಿಯ ಬಗ್ಗೆ ಮಾತನಾಡುವುದಿಲ್ಲ" ಎಂದು ಪೂನಾವಾಲಾ ವಾಗ್ದಾಳಿ ನಡೆಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.