ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಾಮಗಾರಿಗಳ ವೇಳೆ ಕಾರ್ಮಿಕರ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡುವಂತಹ ಘಟನೆಯೊಂದು ನಡೆದಿದೆ. ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಪಿಲ್ಲರ್‌ಗಳಿಗೆ ದೀಪ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದ ವೇಳೆ ಗುತ್ತಿಗೆ ಕಾರ್ಮಿಕನೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ. ಇಂದು ಮಧ್ಯಾಹ್ನ ಸುಮಾರು 3:52ರ ಸುಮಾರಿಗೆ ಈ ಆಕಸ್ಮಿಕ ದುರ್ಘಟನೆ ಸಂಭವಿಸಿದೆ. ನಮ್ಮ ಮೆಟ್ರೋ ಪಿಲ್ಲರ್‌ಗಳಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸುವ ಗುತ್ತಿಗೆಯನ್ನು ಎಂ/ಎಸ್ ಎಂ.ಆರ್. ಎಲೆಕ್ಟ್ರಿಕಲ್ಸ್ ಸಂಸ್ಥೆಗೆ ನೀಡಲಾಗಿತ್ತು. ಈ ಸಂಸ್ಥೆಯ ಗುತ್ತಿಗೆ ಕಾರ್ಮಿಕರೊಬ್ಬರು ಟ್ರಿನಿಟಿ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿರುವ ಪಿಲ್ಲರ್ ಸಂಖ್ಯೆ 153ರ ಸಮೀಪ ಮಣ್ಣಿನಲ್ಲಿ ಅರ್ಥ್ ಪಿಟ್ ಕಾಮಗಾರಿಯನ್ನು ನಿರ್ವಹಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕಕ್ಕೆ ಬಂದ ಪರಿಣಾಮ ಕಾರ್ಮಿಕನಿಗೆ ತೀವ್ರವಾಗಿ ವಿದ್ಯುತ್ ಸ್ಪರ್ಶವಾಗಿದೆ.
ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕಾರ್ಮಿಕ ಸಾವು ವಿದ್ಯುತ್ ಸ್ಪರ್ಶದಿಂದ ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ಕಾರ್ಮಿಕನನ್ನು ಸಹೋದ್ಯೋಗಿಗಳು ಮತ್ತು ಮೆಟ್ರೋ ಸಿಬ್ಬಂದಿ ತಕ್ಷಣವೇ ಹತ್ತಿರದ ಸೇಂಟ್ ಫಿಲೋಮಿನಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ರವಾನಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಕಾರ್ಮಿಕ ಕೊನೆಯುಸಿರೆಳೆದಿದ್ದ. ಪರೀಕ್ಷಿಸಿದ ವೈದ್ಯರು, ಕಾರ್ಮಿಕ ಆಗಲೇ ಮೃತಪಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ತನಿಖೆ ಚುರುಕುಗೊಳಿಸಿದ ಅಧಿಕಾರಿಗಳು ಈ ದುರ್ಘಟನೆಗೆ ನಿಖರವಾದ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೆಟ್ರೋ ಕಾಮಗಾರಿ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳಲ್ಲಿ ಲೋಪವಾಗಿದೆಯೇ ಅಥವಾ ಅರ್ಥ್ ಪಿಟ್ ತೆಗೆಯುವಾಗ ಬೇರೆ ಯಾವುದಾದರೂ ಕಾರಣದಿಂದ ವಿದ್ಯುತ್ ಪ್ರವಹಿಸಿದೆಯೇ ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ಆರಂಭಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಘಟನೆಯ ನೈಜ ಕಾರಣ ಮತ್ತು ತಪ್ಪಿತಸ್ಥರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಬಿಎಂಆರ್‌ಸಿಎಲ್ ಸಂತಾಪ ಜೀವ ಕಳೆದುಕೊಂಡ ಗುತ್ತಿಗೆ ಕಾರ್ಮಿಕನ ಕುಟುಂಬಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತೀವ್ರ ಸಂತಾಪ ಸೂಚಿಸಿದೆ. ದುಡಿಯಲು ಬಂದ ಕಾರ್ಮಿಕನೊಬ್ಬ ಈ ರೀತಿ ಆಕಸ್ಮಿಕವಾಗಿ ಸಾವನ್ನಪ್ಪಿರುವುದು ಆತನ ಕುಟುಂಬ ಸದಸ್ಯರಿಗೆ ಆಘಾತ ತಂದಿದೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ವೇಗವಾಗಿ ನಡೆಯುತ್ತಿವೆ. ಆದರೆ, ಈ ಯೋಜನೆಗಳಲ್ಲಿ ಕೆಲಸ ಮಾಡುವ ತಳಮಟ್ಟದ ಕಾರ್ಮಿಕರ ಸುರಕ್ಷತೆ ಬಗ್ಗೆ ಗುತ್ತಿಗೆದಾರರು ಹಾಗೂ ಬಿಎಂಆರ್‌ಸಿಎಲ್ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ವಿದ್ಯುತ್ ಕಾಮಗಾರಿಗಳಂತಹ ಅತ್ಯಂತ ಸೂಕ್ಷ್ಮ ಕೆಲಸಗಳನ್ನು ಮಾಡುವಾಗ ಕಡ್ಡಾಯವಾಗಿ ರಕ್ಷಣಾ ಕವಚಗಳನ್ನು ಒದಗಿಸಬೇಕು ಹಾಗೂ ನುರಿತ ಮೇಲ್ವಿಚಾರಕರ ಉಪಸ್ಥಿತಿಯಲ್ಲಿಯೇ ಕೆಲಸ ನಡೆಯುವಂತೆ ನೋಡಿಕೊಳ್ಳಬೇಕಿರುವುದು ಅತ್ಯಗತ್ಯ.