2026-06-28 04:02:19

D K Shivakumar | ನಾಡಿನಾದ್ಯಂತ ಸಂಭ್ರಮದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ | SNK

D K Shivakumar | ನಾಡಿನಾದ್ಯಂತ ಸಂಭ್ರಮದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ | SNK

ಬೆಂಗಳೂರು, ಜೂ.27- ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಬೆಂಗಳೂರು ಸೇರಿದಂತೆ ನಾಡಿನಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಜಿಬಿಎ, ಬಿಡಿಎ, ನಾಡಪ್ರಭು ಕೆಂಪೇಗೌಡರ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಕಾರ್ಯಕ್ರಮಗಳ ಮೆರಗು ಹೆಚ್ಚಿಸಿದರು. ಮುಖ್ಯಮಂತ್ರಿಯವರು ಬೆಳಗ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಯಲಹಂಕ ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿರುವ ಪ್ರತಿಮೆಗೆ ಹಾಗೂ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ನಂತರ ಬೆಂಗಳೂರಿನ ಚಲ್ಲಘಟ್ಟ ಕೆಂಪೇಗೌಡ ಬಡಾವಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌‍.ಎಂ.ಕೃಷ್ಣ ದಶಪಥ ರಸ್ತೆ ಲೋಕಾರ್ಪಣೆ ಮಾಡಿದರು. 600 ಕೋಟಿ ರೂಪಾಯಿಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಿರುವ 10.7 ಕಿ.ಲೋ. ಮೀಟರ್‌ ಉದ್ಧದ ಈ ರಸ್ತೆಯಲ್ಲಿ ಸಂಪೂರ್ಣ ಉಚಿತ ಸಂಚಾರಕ್ಕೆ ಅವಕಾಶವಿದ್ದು, ಈವರೆಗೂ ಟೂಲ್‌ ನೀಡಿ ಪ್ರಯಾಣಿಸಬೇಕಾಗಿದ್ದ ನೈಸ್‌‍ ರಸ್ತೆಗೆ ಪರ್ಯಾಯವಾಗಿದೆ. ಮೂರು ಕೆಳಸೇತುವೆ, 11 ಮೇಲ್ಸೆತುವೆ, 270 ಮೀಟರ್‌ ಉದ್ಧದ ಸುರಂಗ ಮಾರ್ಗ ಹೊಂದಿದೆ. ಆರು ಪಥ ಮುಖ್ಯ ರಸ್ತೆ, ನಾಲ್ಕು ಪಥ ಸರ್ವಿಸ್‌‍ ರಸ್ತೆಗಳನ್ನು ಸೇರಿ ಒಟ್ಟು 10 ಪಥಗಳನ್ನು ಹೊಂದಿದೆ. ಇಂದು ಬೆಳಗ್ಗೆ ಆಯೋಜಿಸಲಾಗಿದ್ದ 10 ಕೆ ರನ್‌, 5ಕೆ ಮ್ಯಾರಥಾನ್‌ ಮೂಲಕ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ನಾಡಪ್ರಭು ಕೆಂಪೇಗೌಡ ಅವರ 517ನೇ ಜನ ದಿನಾಚರಣೆಯ ಅಂಗವಾಗಿ ಕೆಂಪೇಗೌಡರ ಸಾರಕ ಅನಾವರಣಗೊಳಿಸಲಾಗಿದೆ.ಚಲ್ಲಘಟ್ಟ ಸುತ್ತಮುತ್ತಾ 15 ಲಕ್ಷ ಸಸಿಗಳನ್ನು ನೆಟ್ಟು 250 ಎಕರೆಯನ್ನು ಅರಣ್ಯೀಕರಣಗೊಳಿಸುವ ಅಭಿಯಾನಕ್ಕೂ ಮುಖ್ಯಮಂತ್ರಿ ಚಾಲನೆ ನೀಡಿದರು. ನಾಡಪ್ರಭು ಕೆಂಪೇಗೌಡರ ಸಮಾಧಿ-ಕೆಂಪಾಪುರ-ಮಾಗಡಿ, ಕೆಂಪಾಂಬುಧಿ ಕೆರೆ ಗಡಿಗೋಪುರ, ಲಾಲ್‌ ಬಾಗ್‌ ಗಡಿ ಗೋಪುರ, ಮೇಖ್ರಿ ವೃತ್ತ ಗಡಿ ಗೋಪುರ, ಹಲಸೂರು ಕೆರೆಗಡಿ ಗೋಪುರ, ಅವರಿ ಚೆನ್ನಕೇಶವ ದೇವಾಲಯ, ಹುತ್ರಿದುರ್ಗದ ಬಯಲು ಬಿಸಿಲು ಬಸವಣ್ಣನ ಸ್ಥಳ ಸೇರಿದಂತೆ ಏಳು ಕಡೆಗಳಿಂದ ಆಗಮಿಸಿದ ಪುರಜ್ಯೋತಿಗಳನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಸ್ವೀಕರಿಸಿದರು.

ನಂತರ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯ ಅಂಗವಾಗಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದರು.ನಾಡಿನ ಹಲವೆಡೆ ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಾಡಪ್ರಭು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕೆಂಪೇಗೌಡರ ಆಡಳಿತದಲ್ಲಿ ಜಾರಿಗೊಂಡ ಪ್ರಗತಿ ಪರ ಯೋಜನೆಗಳು ಹಾಗೂ ದೂರದೃಷ್ಟಿ ಕಾರ್ಯಕ್ರಮಗಳ ಕುರಿತು ಗಣ್ಯರು ವಿವರಣೆ ನೀಡಿದರು.ಆದರ್ಶಪ್ರಾಯ ಆಡಳಿತ ನೀಡಿ, ಬೆಂಗಳೂರು ನಿರ್ಮಾಣಕ್ಕೆ ಬುನಾದಿ ಹಾಕಿದ ಕೆಂಪೇಗೌಡರ ಗುಣಗಾನ ಮಾಡಲಾಯಿತು.          

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.