ಬೆಂಗಳೂರು: ರಾಜ್ಯ ಬಿಜೆಪಿಯ ಇಬ್ಬರು ಪ್ರಮುಖ ನಾಯಕರಾದ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನಡುವಿನ ರಾಜಕೀಯ ಸಂಘರ್ಷ ಈಗ ಬಹಿರಂಗ ಸವಾಲು-ಪ್ರತಿಸವಾಲುಗಳ ಮಟ್ಟಕ್ಕೆ ತಲುಪಿದೆ. "ಧೈರ್ಯವಿದ್ದರೆ ಮುಂದಿನ ಚುನಾವಣೆಯಲ್ಲಿ ಯಲಹಂಕದಿಂದ ನನ್ನ ವಿರುದ್ಧವೇ ಸ್ಪರ್ಧಿಸಲಿ" ಎಂಬ ವಿಶ್ವನಾಥ್ ಅವರ ನೇರ ಸವಾಲಿಗೆ ಡಾ. ಕೆ. ಸುಧಾಕರ್ ಈಗ ತಿರುಗೇಟು ನೀಡಿದ್ದು, "ಅವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ" ಎಂದು ಗುಡುಗಿದ್ದಾರೆ.
ಯಲಹಂಕದಲ್ಲೇ ನಿಂತು ಸೋಲಿಸ್ತೀನಿ: ಸುಧಾಕರ್ ಖಡಕ್ ವಾರ್ನಿಂಗ್ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, "ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಚಾಲೆಂಜ್ ಅನ್ನು ನಾನು ಒಪ್ಪಿಕೊಂಡಿದ್ದೇನೆ. ತಾಕತ್ತಿದ್ದರೆ ಅವರು ಚಿಕ್ಕಬಳ್ಳಾಪುರಕ್ಕೆ ಬಂದು ಸ್ಪರ್ಧಿಸಲಿ, ನಾನು ಸ್ವಾಗತಿಸುತ್ತೇನೆ. ಇಲ್ಲವೇ ಯಲಹಂಕ ಕ್ಷೇತ್ರದಲ್ಲೇ ನಾನು ಅವರ ವಿರುದ್ಧ ನಿಂತು ಅವರನ್ನು ಸೋಲಿಸುತ್ತೇನೆ. ಅವರು ನನ್ನ ಜೊತೆ ಯಲಹಂಕದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿ, ಅಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ" ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಕ್ಯಾಮೆರಾಗಳ ಮುಂದೆ ನಿಂತು ಆ ರೀತಿಯಾಗಿ ಹಗುರವಾಗಿ ಮಾತನಾಡುವುದನ್ನು ವಿಶ್ವನಾಥ್ ಮೊದಲು ನಿಲ್ಲಿಸಬೇಕು ಎಂದು ಕಿಡಿಕಾರಿದ್ದಾರೆ.
ಹೈಕಮಾಂಡ್ ಸೂಚನೆಗೆ ಬದ್ಧ ಎಂದ ಸಂಸದ ವಿಶ್ವನಾಥ್ ವಿರುದ್ಧ ಕೆಂಡ ಕಾರಿದ ಸುಧಾಕರ್, ಪಕ್ಷದ ಶಿಸ್ತಿನ ಚೌಕಟ್ಟನ್ನೂ ನೆನಪಿಸಿದ್ದಾರೆ. "ಎಸ್.ಆರ್.ವಿಶ್ವನಾಥ್ ಸವಾಲನ್ನು ನಾನು ಸ್ವೀಕರಿಸಿದ್ದರೂ, ಅಂತಿಮವಾಗಿ ನಮ್ಮ ಪಕ್ಷದ ಹೈಕಮಾಂಡ್ ನಾಯಕರು ಏನು ಹೇಳುತ್ತಾರೋ ಅದರಂತೆ ನಾನು ನಡೆದುಕೊಳ್ಳುತ್ತೇನೆ. ಅವರು ಎಲ್ಲೇ ಸ್ಪರ್ಧಿಸಲು ಸೂಚಿಸಿದರೂ ನಾನು ಸಿದ್ಧ" ಎಂದು ಸ್ಪಷ್ಟಪಡಿಸಿದ್ದಾರೆ.
ಕಮಲ ಪಾಳಯದಲ್ಲಿ ತಾರಕಕ್ಕೇರಿದ ಆಂತರಿಕ ಬೇಗುದಿ ಒಂದೇ ಪಕ್ಷದ ಸಂಸದ ಹಾಗೂ ಶಾಸಕರ ನಡುವಿನ ಈ ಬಹಿರಂಗ ಜಿದ್ದಾಜಿದ್ದಿ ರಾಜ್ಯ ಬಿಜೆಪಿಯಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ. ಕ್ಷೇತ್ರ ಹಂಚಿಕೆ ಹಾಗೂ ಸ್ಥಳೀಯ ರಾಜಕೀಯ ಪ್ರಾಬಲ್ಯದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಇದ್ದ ಆಂತರಿಕ ಅಸಮಾಧಾನ, ಈಗ ನೇರವಾಗಿಯೇ ಸ್ಫೋಟಗೊಂಡಿದೆ. ಮುಂಬರುವ ದಿನಗಳಲ್ಲಿ ಈ ಇಬ್ಬರು ನಾಯಕರ ಜಗಳ ಎತ್ತ ಸಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.