2026-06-29 12:01:14

SHARMILA MANDRE | ತಮಿಳು ನಿರ್ಮಾಪಕನೊಂದಿಗೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ | SNK

SHARMILA MANDRE | ತಮಿಳು ನಿರ್ಮಾಪಕನೊಂದಿಗೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ | SNK

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶರ್ಮಿಳಾ ಮಾಂಡ್ರೆ ಅವರು ತಮ್ಮ ಬದುಕಿನ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ. ತಮಿಳು ಚಿತ್ರರಂಗದ ಯಶಸ್ವಿ ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರ ಜೊತೆ ಶರ್ಮಿಳಾ ಮಾಂಡ್ರೆ ಅವರ ನಿಶ್ಚಿತಾರ್ಥ ಅತ್ಯಂತ ಸಡಗರದಿಂದ ನೆರವೇರಿದೆ.  ಇತ್ತೀಚೆಗಷ್ಟೇ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿಯ ಉಂಗುರ ಬದಲಾಯಿಸುವ ಶಾಸ್ತ್ರ ಸಂಪ್ರದಾಯಬದ್ಧವಾಗಿ ನಡೆದಿದೆ. ಶರ್ಮಿಳಾ ಮಾಂಡ್ರೆ ಅವರ ಕೈಹಿಡಿಯಲಿರುವ ಸುಧನ್ ಸುಂದರಂ ಅವರು ಕಾಲಿವುಡ್‌ನಲ್ಲಿ ಪ್ರಭಾವಶಾಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ, ನಟ ವಿಜಯ್ ಸೇತುಪತಿ ಅಭಿನಯದ 50ನೇ ಸಿನಿಮಾ 'ಮಹಾರಾಜ' ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಇವರು ನಿರ್ಮಾಣ ಮಾಡಿದ್ದಾರೆ.

ಸುಧನ್ ಮತ್ತು ಶರ್ಮಿಳಾ ಕಳೆದ ದೀರ್ಘ ಸಮಯದಿಂದ ಪರಸ್ಪರ ಪರಿಚಿತರಾಗಿದ್ದು, ಇವರ ಸ್ನೇಹ ಆ ಬಳಿಕ ಪ್ರೇಮಕ್ಕೆ ತಿರುಗಿತ್ತು. ಇದೀಗ ಇಬ್ಬರೂ ಹಿರಿಯರ ಒಪ್ಪಿಗೆ ಪಡೆದು ಪ್ರೇಮ ವಿವಾಹಕ್ಕೆ ಸಜ್ಜಾಗಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ ಅವರು 2007ರಲ್ಲಿ ತೆರೆಕಂಡ 'ಸಜನಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ 'ನವಗ್ರಹ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ನಾಡಿನಾದ್ಯಂತ ಮನೆಮಾತಾದರು. ಈ ಚಿತ್ರದ 'ಕಣ್ ಕಣ್ಣ ಸಲಿಗೆ' ರೋಮ್ಯಾಂಟಿಕ್ ಹಾಡು ಇಂದಿಗೂ ಸಂಗೀತ ಪ್ರೇಮಿಗಳ ನೆಚ್ಚಿನ ಗೀತೆಯಾಗಿದೆ. ಇತ್ತೀಚೆಗಷ್ಟೇ ತೆರೆಕಂಡ ದರ್ಶನ್ ಅವರ 'ಡೆವಿಲ್' ಸಿನಿಮಾದಲ್ಲೂ ಶರ್ಮಿಳಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ನಟಿಸಿ ಶರ್ಮಿಳಾ ಅವರು ಸೈ ಎನಿಸಿಕೊಂಡಿದ್ದಾರೆ.

ನಿಶ್ಚಿತಾರ್ಥ ಯಶಸ್ವಿಯಾಗಿ ಮುಗಿದಿದ್ದರೂ, ಮದುವೆಯ ದಿನಾಂಕದ ಬಗ್ಗೆ ಈ ತಾರಾ ಜೋಡಿ ಇನ್ನೂ ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲವಂತೆ. ಸದ್ಯಕ್ಕೆ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದು, ವಿವಾಹದ ದಿನಾಂಕ ಹಾಗೂ ಮದುವೆಯ ಇತರೆ ಯೋಜನೆಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಿ ಅಭಿಮಾನಿಗಳಿಗೆ ತಿಳಿಸುವುದಾಗಿ ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ. ನಿಶ್ಚಿತಾರ್ಥದ ಸುದ್ದಿ ಹೊರಬೀಳುತ್ತಿದ್ದಂತೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.