ಉಕ್ರೇನ್ ದೇಶಕ್ಕೆ ಪೆಟ್ಟಿನ ಮೇಲೆ ಪೆಟ್ಟು ಕೊಡುತ್ತಿರುವ ರಷ್ಯಾ, ಸಾಲು ಸಾಲು ಸಂಕಷ್ಟಕ್ಕೆ ಸಿಲುಕುವ ರೀತಿ ಮಾಡುತ್ತಿದೆ ಎಂಬ ಆರೋಪ ಇದೆ. ಅದರಲ್ಲೂ ರಷ್ಯಾ ನಡೆಸಿರುವ ದಾಳಿ ಪರಿಣಾಮ ಉಕ್ರೇನ್ ದೇಶದ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದ್ದು, ಎಲ್ಲಿ ನೋಡಿದರೂ ಬರೀ ಕತ್ತಲೆಯೇ ತುಂಬಿ ಹೋಗಿದೆ. ಉಕ್ರೇನ್ ಜನ ಕೂಡ ಚಳಿಗಾಲದ ಸಮಯದಲ್ಲಿ ಕರೆಂಟ್ ಇಲ್ಲದೆ, ಸೂಕ್ತ ಹೀಟರ್ ವ್ಯವಸ್ಥೆ ಇಲ್ಲದೆ ಸಾವು & ಬದುಕಿನ ನಡುವೆ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಇನ್ನುಳಿದಂತೆ ರಷ್ಯಾ ಸೇನೆ ಕೂಡ ಯಾವುದೇ ಗ್ಯಾಪ್ ಕೊಡದಂತೆ ವಿದ್ಯುತ್ ಘಟಕಗಳ ಮೇಲೆ ದಾಳಿ ಮಾಡಿ ಎಲ್ಲವನ್ನ ಉಡೀಸ್ ಮಾಡಿದೆ. ಹೀಗಿದ್ದಾಗ ಉಕ್ರೇನ್ ದೇಶದ ಉದ್ದಿಮೆಗಳು ದೊಡ್ಡ ಸಂಕಷ್ಟಕ್ಕೆ ಸಿಲುಕಿಬಿಟ್ಟಿವೆ. ಒಂದು ಕಡೆ ಮಾರುಕಟ್ಟೆ ಸಮಸ್ಯೆ ಕಾಡುವಾಗ, ಇನ್ನೊಂದು ಕಡೆ ಉತ್ಪಾದನೆ ಕೂಡ ಮಾಡಲು ಆಗದೆ ಉಕ್ರೇನ್ ದೇಶದ ದೊಡ್ಡ ದೊಡ್ಡ ಫ್ಯಾಕ್ಟರಿಗಳು ಬಾಗಿಲು ಮುಚ್ಚುವ ಹಂತಕ್ಕೆ ಈಗ ಬಂದಿವೆ. ಯುರೋಪ್ ಮತ್ತು ಅಮೆರಿಕದ ಕಾಲು ಹಿಡಿದು ಹಣ ತರುತ್ತಿರುವ ಉಕ್ರೇನ್‌ಗೆ ಈಗ ಮತ್ತೆ ಮತ್ತೆ ಹೊಸದಾದ ಸಮಸ್ಯೆಗಳು ಎದುರಾಗುತ್ತಿದೆ.
ಯುದ್ಧ ನಿಲ್ಲದಿದ್ದರೆ ಸರ್ವನಾಶ ಗ್ಯಾರಂಟಿ: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಆದಷ್ಟು ಬೇಗ ನಿಲ್ಲಬೇಕಿದ್ದು, ಯುದ್ಧ ನಿಂತಾಗ ಮಾತ್ರ ಉಕ್ರೇನ್ ನೆಮ್ಮದಿಯಾಗಿ ಬದುಕಲು ಸಾಧ್ಯ. ಅಕಸ್ಮಾತ್ ಇದೇ ರೀತಿಯಾಗಿ ಯುದ್ಧವನ್ನ ರಷ್ಯಾ ಮುಂದುವರಿಸಿದರೆ ಅದು ಭವಿಷ್ಯದಲ್ಲಿ ಇಡೀ ಯುರೋಪ್ ದೇಶಗಳನ್ನೇ ಸಂಕಷ್ಟಕ್ಕೆ ಸಿಲುಕಿಸಿಬಿಡುವ ಆತಂಕ ಕಾಡುತ್ತಿದೆ. ಮತ್ತೊಂದು ಕಡೆ ಅಮೆರಿಕ ಹಗಲು & ರಾತ್ರಿ ಲೆಕ್ಕ ಹಾಕದೆ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಪರದಾಡುತ್ತಿದೆ. ಈ ಸಮಯದಲ್ಲಿ ಉಕ್ರೇನ್ ಆರ್ಥಿಕ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ.