2026-03-07 01:45:41

Tomorrow is Valentines Day | ನಾಳೆ ವ್ಯಾಲಂಟೈನ್ಸ್‌ ಡೇ ಪುಷ್ಪ ಹರಾಜು ಕೇಂದ್ರದಲ್ಲಿ ಗುಲಾಬಿ ಹೂಗಳದ್ದೇ ಕಾರುಬಾರು | Speed News Kannada

Tomorrow is Valentines Day | ನಾಳೆ ವ್ಯಾಲಂಟೈನ್ಸ್‌ ಡೇ ಪುಷ್ಪ ಹರಾಜು ಕೇಂದ್ರದಲ್ಲಿ ಗುಲಾಬಿ ಹೂಗಳದ್ದೇ ಕಾರುಬಾರು | Speed News Kannada

ಬೆಂಗಳೂರು: ವಿಶ್ವ ಪ್ರೇಮಿಗಳ ದಿನಕ್ಕೆ ಗುಲಾಬಿಗೆ ಮಾತ್ರ ಬೇಡಿಕೆ ಹೆಚ್ಚು.ನಾಳೆ ಆಚರಿಸಲಾಗುತ್ತಿರುವ ಈ ವಿಶ್ವ ಪ್ರೇಮಿಗಳ ದಿನಕ್ಕೆ ಪ್ರೀತಿಸುವ ಹೃದಯಕ್ಕೆ ಒಂದು ಗುಲಾಬಿ ನೀಡಿದರೆ ಮಾತ್ರ ವ್ಯಾಲಂಟೈನ್ಸ್‌ ಡೇ ಪರಿಪೂರ್ಣವಾದ ಕೃತಾರ್ಥ ಭಾವ ಮೂಡೀತು.
ಅದೆಷ್ಟೇ ಬೆಲೆ ತೆತ್ತಾದರೂ ಪ್ರೀತಿಸುವವರಿಗೆ ಗುಲಾಬಿ ನೀಡದಿದ್ದರೆ ಪ್ರೇಮಿಗಳ ದಿನಾಚರಣೆ ಕಳೆಕಟ್ಟುವುದಾದರೂ ಹೇಗೆ? 
ನಗರದ ಹೆಬ್ಬಾಳ ಸಮೀಪ ಕೃಷಿ ವಿಶ್ವವಿದ್ಯಾಲಯ ಪಕ್ಕದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ (ಐಎಫ್‌ಎಬಿ)ಇದೆ. ಪ್ರತಿ ದಿನ ಇಲ್ಲಿ ಹೂಗಳ ಹರಾಜು ನಡೆಯುತ್ತಲೇ ಇರುತ್ತದೆಯಾದರೂ ವ್ಯಾಲೆಂಟೈನ್ ಡೇ ಆಚರಿಸುವ ಫೆಬ್ರವರಿ ತಿಂಗಳಲ್ಲಿ ಗುಲಾಬಿ ಹೂಗಳ ರಾಶಿ ರಾಶಿಯನ್ನೇ ಕಾಣಬಹುದು. ಬಣ್ಣ ಬಣ್ಣದ ಗುಲಾಬಿ ಹೂಗಳನ್ನು ಇಡೀ ದೇಶ ಮತ್ತು ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಬಹುಶಃ ಜಗತ್ತಿನ ಪ್ರೇಮಿಗಳು ಅತಿ ಹೆಚ್ಚು ಬಳಸುವುದು ಬೆಂಗಳೂರಿನ ಗುಲಾಬಿ ಎಂದರೆ ಅತಿಶಯೋಕ್ತಿಯೇನಲ್ಲ.
ದೊಡ್ಡಬಳ್ಳಾಪುರ, ಕೋಲಾರ ಚಿಕ್ಕಬಳ್ಳಾಪುರ,ಹೊಸೂರು, ಆನೇಕಲ್‌, ಹೊಸಕೋಟೆ  ಮೊದಲಾದ ಪ್ರದೇಶಗಳಿಂದ ಇಲ್ಲಿಗೆ ಹೂಗಳ ಮಾರಾಟಗಾರರು ಆಗಮಿಸುತ್ತಾರೆ. ಇಲ್ಲಿನ ಮಣ್ಣಿನ ಹವಾ ಗುಲಾಬಿಗೆ ಹೇಳಿ ಮಾಡಿಸಿದಂತಿದ್ದು, ಅತಿ ಹೆಚ್ಚು ಪ್ರಮಾಣದಲ್ಲಿ ಗುಲಾಬಿ ಬೆಳೆಯುತ್ತಾರೆ. 
ಈ ಗುಲಾಬಿಗಳಿಗೆ ವಿಶೇಷ ಗುಣವಿದ್ದು, ಕತ್ತರಿಸಿದ ಬಳಿಕ ಏಳು ದಿನಗಳ ವರೆಗೆ ತಾಜಾತನದಲ್ಲಿ ಇಡಬಹುದು. ಇಲ್ಲಿ ಹೂಗಳ ಹರಾಜು ಪ್ರಕ್ರಿಯೆ ನಂತರ ಬೇರೆ ಬೇರೆ ಸ್ಥಳಗಳಿಗೆ ಪೂರೈಕೆಯಾಗುತ್ತದೆ. ಈ ಕೇಂದ್ರದಲ್ಲಿ ಶೀತಲೀಕರಣ ವ್ಯವಸ್ಥೆ ಇದ್ದು ಕೆಡುವ ಪ್ರಮೇಯವೇ ಬರುವುದಿಲ್ಲ.
ಪ್ರತಿನಿತ್ಯ ನಡೆಯುವ ವಹಿವಾಟಿನಲ್ಲಿ ನೋಂದಣಿ ಮಾಡಿಸಿದ ಗುಲಾಬಿ ಬೆಳೆಗಾರರು ಮತ್ತು ಖರೀದಿದಾರರು ಪ್ರತಿದಿನದ ವ್ಯಾಪಾರ ವಹಿವಾಟಿನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಐಎಫ್‌ಎಬಿ ಸಹಾಯಕ ಮುಖ್ಯ ವ್ಯವಸ್ಥಾಪಕಿ ವೀಣಾ ಹೇಳುತ್ತಾರೆ.
ಈ ಐಎಫ್‌ಎಬಿ ಕೇಂದ್ರದಿಂದ ದೆಹಲಿ, ಕೋಲ್ಕತ್ತಾ, ಚೆನ್ನೈ, ಮುಂಬೈ, ಹೈದರಾಬಾದ್, ಚಂಡೀಗಢ ನಗರಗಳು ಮತ್ತು ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ, ರಾಜ್ಯಗಳು, ಸಿಂಗಾಪುರ, ಮಲೇಷ್ಯಾ, ಅರಬ್‌ ರಾಷ್ಟ್ರಗಳು ಮತ್ತು ನ್ಯೂಜಿಲ್ಯಾಂಡ್‌ ಗೆ ಪ್ರತಿನಿತ್ಯ ಲಕ್ಷಾಂತರ ಗುಲಾಬಿಗಳು ರಫ್ತಾಗುತ್ತಿವೆ.
ಪ್ರೇಮಿಗಳ ದಿನಕ್ಕೆ ಕಟಾವಿಗೆ ಬರುವ ಹಾಗೆ ರೈತರು ಗುಲಾಬಿ ಬೆಳೆಯುತ್ತಾರೆ. ಈ ತಿಂಗಳ ಎರಡನೇ ವಾರದಲ್ಲಿ ಪ್ರತಿನಿತ್ಯ ಬರುವ ಗುಲಾಬಿಗಳ ಪ್ರಮಾಣ ಹೆಚ್ಚುತ್ತದೆ ಮತ್ತು ಫೆ. 14ರ ಪ್ರೇಮಿಗಳ ದಿನಕ್ಕೆ ಮುಂಚಿತಾವಾಗಿ ಇಲ್ಲಿಂದ ಪೂರೈಕೆಯಾಗುವ ಗುಲಾಬಿ ಹೂಗಳ ಸಂಖ್ಯೆ ದುಪ್ಪಟ್ಟಾಗುತ್ತದೆ. 
ವರ್ಷದಿಂದ ವರ್ಷಕ್ಕೆ ಗುಲಾಬಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಏರಿಕೆಯಾಗುತ್ತಲೇ ಇರುತ್ತದೆ. ಸಾಮಾನ್ಯ ದಿನಗಳಲ್ಲಿ ಈ ಕೇಂದ್ರಕ್ಕೆ ಪ್ರತಿನಿತ್ಯ 5 ಲಕ್ಷ ಗುಲಾಬಿಗಳು ಪೂರೈಕೆಯಾದರೆ ಈ ಹಬ್ಬಕ್ಕೆ ಪ್ರತಿನಿತ್ಯ 9 ಲಕ್ಷದಿಂದ 10 ಲಕ್ಷ ಗುಲಾಬಿಗಳು ಪೂರೈಕೆಯಾಗಿವೆ. 
2026 ರ ಫೆಬ್ರವರಿ 1ರಿಂದ 12ರವರೆಗೆ 88.33 ಲಕ್ಷ ಗುಲಾಬಿ ಹೂಗಳನ್ನು ಹರಾಜು ಹಾಕಲಾಗಿದೆ. 2025ರಲ್ಲಿ ಇದೇ ಅವದಿಯಲ್ಲಿ 88.11 ಲಕ್ಷ ಗುಲಾಬಿ ಹೂಗಳನ್ನು ಹರಾಜು ಹಾಕಲಾಗಿದೆ ಎಂದು ವೀಣಾ ಅವರು ಮಾಹಿತಿ ನೀಡಿದ್ದಾರೆ.
ವ್ಯಾಲೆಂಟೈನ್ ಡೇ ಸಂದರ್ಭದಲ್ಲಿ ಇಲ್ಲಿ ಕೆಂಗುಲಾಬಿ (ತಾಜಮಹಲ್‌ 15 ರೂಪಾಯಿಗೆ ಒಂದರಂತೆ ಹರಾಜಿನಲ್ಲಿ ಮಾರಾಟವಾಗಿತ್ತು. ಹೋದವರ್ಷ ನೇರಳೆ ಬಣ್ಣದ ಅಥವಾ ನ್ಯೂ ಆರ್ಲಿಯನ್ಸ್‌ ಗುಲಾಬಿ ಒಂದಕ್ಕೆ ಗರಿಷ್ಠ ದರ ರೂ.40ರಂತೆ ಹರಾಜಿನಲ್ಲಿ ಮಾರಾಟವಾಗಿತ್ತು ಎಂದು ತಿಳಿದು ಬಂದಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಗುಲಾಬಿ ಹೂ ಕೊಡುವುದನ್ನು ಮರೆಯಬೇಡಿ!

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.