ಬೆಂಗಳೂರು: ಈ ವರ್ಷದ ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ನೀರಿಗೆ ಅಭಾವ ಉಂಟಾಗುವುದಿಲ್ಲ ಎಂದು ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ತಿಳಿಸಿದೆ.
ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಮತ್ತು ಕಬಿನಿ ಅಣೆಕಟ್ಟುಗಳಲ್ಲಿ ಪ್ರಸ್ತುತ 52.39 ಸಾವಿರ ಮಿಲಿಯನ್ ಕ್ಯೂಬಿಕ್ (ಟಿಎಂಸಿ) ಅಡಿ ನೀರು ಲಭ್ಯವಿದೆ. ಇದು ಕುಡಿಯುವ ನೀರಿಗೆ ಸಾಕಾಗಲಿದೆ ಎಂದು ಜಲಮಂಡಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂಬ ಆತಂಕ ಬೆಂಗಳೂರು ನಿವಾಸಿಗಳಿಗೆ ಕಾಡತೊಡಗಿತ್ತು.
KRS ಅಣೆಕಟ್ಟಿನಲ್ಲಿ 39.0 ಟಿಎಂಸಿ ಮತ್ತು ಕಬಿನಿಯಲ್ಲಿ 13.39 ಟಿಎಂಸಿ ಅಡಿ ನೀರು ಲಭ್ಯವಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜುಲೈವರೆಗೆ ಕುಡಿಯುವ ನೀರಿಗಾಗಿ 11 ಟಿಎಂಸಿ ಅಡಿ ನೀರನ್ನು ಮೀಸಲಿಡುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಜಲಮಂಡಳಿ ಪತ್ರ ಬರೆದಿದೆ.
KRS ಅಣೆಕಟ್ಟಿಲ್ಲಿ ಪ್ರಸ್ತುತ 117 ಅಡಿಗಳಷ್ಟು ನೀರು ಸಂಗ್ರಹವಿದೆ. ಕೆಆರ್ ಎಸ್ ಸಾಮರ್ಥ್ಯವೇ 124 ಅಡಿಗಳು. ಕಳೆದ ವರ್ಷ ಇದೇ ಅವಧಿಯಲ್ಲಿ ನೀರಿನ ಮಟ್ಟ 92 ಅಡಿಗಳಷ್ಟು ಮಾತ್ರ ಇತ್ತು.
ಕಾವೇರಿ ನೀರಾವರಿ ನಿಗಮ ಮೇಲ್ವಿಚಾರಣಾ ಎಂಜಿನಿಯರ್ ರಘುರಾಮ್ ಮಾಹಿತಿ ನೀಡಿ KRS ಮತ್ತು ಕಬಿನಿ ಅಣೆಕಟ್ಟಿನಲ್ಲಿ ಸಾಕಷ್ಟು ನೀರು ಲಭ್ಯವಿದ್ದು, ಕುಡಿಯುವ ಉದ್ದೇಶಕ್ಕೆ ಮೀಸಲಿಡಲಾಗಿದೆ. ಆದರೂ ಹಿಂದಿನ ವರ್ಷಗಳಂತೆ, ಬೇಸಿಗೆಯಲ್ಲಿ ನೀರು ವ್ಯರ್ಥವಾಗುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.