ನವದೆಹಲಿ: ಕಳೆದ ಜೂನ್ ತಿಂಗಳ ಭೀಕರ ಒಣ ಹವೆಯ ಬೆನ್ನಲ್ಲೇ ದೇಶದ ರೈತಾಪಿ ವರ್ಗಕ್ಕೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತ್ತೊಂದು ಆತಂಕಕಾರಿ ಸುದ್ದಿ ನೀಡಿದೆ. ಪ್ರಸಕ್ತ ವರ್ಷದ ಜುಲೈ ತಿಂಗಳಿನಲ್ಲಿ ದೇಶಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದ್ದು, ವಾಡಿಕೆಗಿಂತ ಹೆಚ್ಚು ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ ತಿಂಗಳ ಒಟ್ಟಾರೆ ಮಳೆಯು ದೀರ್ಘಾವಧಿ ಸರಾಸರಿಯ (ಎಲ್‌ಪಿಎ) ಕೇವಲ ಶೇಕಡಾ 94 ರಷ್ಟು ಮಾತ್ರ ಇರಲಿದ್ದು, ಇದು ಮುಂಗಾರು ಹಂಗಾಮಿನ ಪ್ರಮುಖ ಬಿತ್ತನೆ ಅವಧಿಯ ಮೇಲೆ ತೀವ್ರ ಪರಿಣಾಮ ಬೀರಲಿದೆ. ದೇಶದ ಅರ್ಧಕ್ಕಿಂತ ಹೆಚ್ಚು ಖಾರಿಫ್ ಬಿತ್ತನೆ ಪ್ರದೇಶಗಳು ಸಂಪೂರ್ಣವಾಗಿ ಮಳೆಯನ್ನೇ ಅವಲಂಬಿಸಿದ್ದು, ಈಗಾಗಲೇ ಹಲವು ರಾಜ್ಯಗಳಲ್ಲಿ ಬಿತ್ತನೆ ಪ್ರಕ್ರಿಯೆ ತಡವಾಗಿದೆ. ವಾಯುವ್ಯ, ಈಶಾನ್ಯ ಮತ್ತು ಮಧ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ, ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ತಿಳಿಸಿದ್ದಾರೆ. ಆದಾಗ್ಯೂ, ಜುಲೈ ಮೊದಲ ವಾರದಿಂದ 10 ದಿನಗಳವರೆಗೆ ದೇಶದ ಹಲವೆಡೆ ಮಳೆಯಾಗುವ ಸಾಧ್ಯತೆಯಿದ್ದು, ಇದು ತಾತ್ಕಾಲಿಕ ರಿಲೀಫ್ ನೀಡಬಹುದು ಎಂದು ಅವರು ಆಶಿಸಿದ್ದಾರೆ.
ಇತಿಹಾಸದಲ್ಲೇ 5ನೇ ಅತ್ಯಂತ ಒಣ ಜೂನ್ ಸಾಮಾನ್ಯವಾಗಿ ಜುಲೈ ತಿಂಗಳು ಭಾರತದ ಅತ್ಯಂತ ಹೆಚ್ಚು ಮಳೆ ತರುವ ತಿಂಗಳಾಗಿದ್ದು, ಇಡೀ ಮುಂಗಾರಿನ ಶೇಕಡಾ 32 ರಷ್ಟು ಮಳೆ ಈ ಅವಧಿಯಲ್ಲೇ ಆಗುತ್ತದೆ. ಆದರೆ ಕಳೆದ ಜೂನ್ ತಿಂಗಳು ಕಳೆದ 125 ವರ್ಷಗಳಲ್ಲೇ 5ನೇ ಅತ್ಯಂತ ಒಣ ಹವೆಯ ಜೂನ್ ಆಗಿ ದಾಖಲಾಗಿದೆ. ಜೂನ್‌ನಲ್ಲಿ ಕೇವಲ 99.5 ಮಿಮೀ ಮಳೆಯಾಗಿದ್ದು, ಇದು ವಾಡಿಕೆಗಿಂತ ಶೇಕಡಾ 40 ರಷ್ಟು ಕಡಿಮೆಯಾಗಿದೆ. ಈ ಮುಂಚೆ 2014 ಮತ್ತು 2009 ರಲ್ಲಿ ಇಷ್ಟು ಕನಿಷ್ಠ ಮಳೆ ದಾಖಲಾಗಿತ್ತು. ಜೂನ್ ತಿಂಗಳಲ್ಲಿ ಮಳೆ ತರುವ ಕರಾವಳಿ ಕಡಿಮೆ ಒತ್ತಡದ ಪ್ರದೇಶಗಳು ಸೃಷ್ಟಿಯಾಗದೇ ಇರುವುದು, ಪೆಸಿಫಿಕ್ ಮಹಾಸಾಗರದಲ್ಲಿ ತಲೆದೋರಿರುವ ಎಲ್ ನಿನೋ ಪರಿಸ್ಥಿತಿ ಮತ್ತು ಎಂಡಿಜೆ ಒಕ್ಕೂಟದ ಪ್ರತಿಕೂಲ ಹವಾಮಾನವೇ ಈ ಮಳೆ ಕೊರತೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಕೃಷಿ ವಲಯಕ್ಕೆ ಭಾರಿ ಹೊಡೆತ, ಕುಂಠಿತಗೊಂಡ ಬಿತ್ತನೆ ಮಳೆ ಕೊರತೆಯ ನೇರ ಪರಿಣಾಮ ದೇಶದ ಕೃಷಿ ಚಟುವಟಿಕೆಗಳ ಮೇಲೆ ಬಿದ್ದಿದೆ. ಕೃಷಿ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದೇಶದಲ್ಲಿ ಬಿತ್ತನೆ ಪ್ರಮಾಣವು ಶೇಕಡಾ 23 ರಷ್ಟು ಕುಸಿದಿದೆ. ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಒರಟು ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವ ಕೇಂದ್ರ ಮತ್ತು ವಾಯುವ್ಯ ಭಾರತದಲ್ಲಿ ಜುಲೈ ತಿಂಗಳಲ್ಲೂ ಶೇಕಡಾ 20 ರಷ್ಟು ಮಳೆ ಕೊರತೆಯಾಗುವ ಮುನ್ಸೂಚನೆ ಇರುವುದರಿಂದ ಕೃಷಿ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಸೋಯಾಬೀನ್ ಮತ್ತು ತೊಗರಿ (ತುರ್) ಬೆಳೆಗಳು ತೀವ್ರ ಅಪಾಯ ಎದುರಿಸುತ್ತಿದ್ದು, ಜುಲೈ ದ್ವಿತೀಯಾರ್ಧದಲ್ಲಿ ಉತ್ತಮ ಮಳೆಯಾಗದಿದ್ದರೆ ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿಯಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
11 ವರ್ಷಗಳಲ್ಲೇ ಕನಿಷ್ಠ ಮುಂಗಾರು ಆತಂಕ ಹವಾಮಾನ ಇಲಾಖೆಯು ಇಡೀ ಮುಂಗಾರು ಹಂಗಾಮಿನ ಮಳೆಯ ಮುನ್ಸೂಚನೆಯನ್ನು ಶೇಕಡಾ 92 ರಿಂದ ಶೇಕಡಾ 90 ಕ್ಕೆ ಇಳಿಸಿದೆ. ಒಂದು ವೇಳೆ ಈ ಮುನ್ಸೂಚನೆ ನಿಜವಾದರೆ, ಇದು ಕಳೆದ 11 ವರ್ಷಗಳಲ್ಲೇ ದೇಶದ ಅತ್ಯಂತ ಕನಿಷ್ಠ ಮುಂಗಾರು ಮಳೆಯ ವರ್ಷವಾಗಲಿದೆ. ಇದರೊಂದಿಗೆ ತಾಪಮಾನದಲ್ಲೂ ಭಾರಿ ಏರಿಕೆಯಾಗಿದ್ದು, ಕಳೆದ ಜೂನ್ ತಿಂಗಳ ಸರಾಸರಿ ಗರಿಷ್ಠ ತಾಪಮಾನವು ವಾಡಿಕೆಗಿಂತ 1.06 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿತ್ತು. ಜುಲೈ ತಿಂಗಳಿನಲ್ಲೂ ದೇಶದ ಬಹುತೇಕ ಭಾಗಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ಸಾಮಾನ್ಯಕ್ಕಿಂತ ಹೆಚ್ಚಾಗಿಯೇ ಇರಲಿದ್ದು, ದೇಶಾದ್ಯಂತ ಬಿಸಿಲಿನ ಬೇಗೆ ಮುಂದುವರಿಯಲಿದೆ.