ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಮತ್ತು ಮೂಲಸೌಕರ್ಯ ವೃದ್ಧಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಮುಂದಾಗಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಹೊಸ ಕೋಚ್ ಡಿಪೋ ಸ್ಥಾಪನೆ ಹಾಗೂ ರೈಲು ನಿಲ್ದಾಣದ ಆಧುನೀಕರಣಕ್ಕೆ ಕೋರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಸಹಾಯಕ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಈ ಹಿಂದೆ ವಿಜಯಪುರ ರೈಲು ನಿಲ್ದಾಣದ ಆವರಣದಲ್ಲಿದ್ದ ಗೂಡ್ಸ್ ಶೆಡ್ಡನ್ನು ಈಗಾಗಲೇ ಅಲಿಯಾಬಾದ್‌ಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಕೋಚ್ ಡಿಪೋ ನಿರ್ಮಾಣಕ್ಕೆ ಅಗತ್ಯವಿರುವ ಜಾಗದ ಕೊರತೆ ಇಲ್ಲ ಎಂದು ಸಚಿವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಡಿಪೋ ಆರಂಭವಾದರೆ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ರೈಲುಗಳ ಸಂಪರ್ಕ ಕಲ್ಪಿಸಲು ಮತ್ತು ಇದನ್ನೊಂದು ಪ್ರಮುಖ ರೈಲ್ವೆ ನಿರ್ವಹಣಾ ಹಬ್ ಆಗಿ ಬೆಳೆಸಲು ಸಾಧ್ಯವಾಗುತ್ತದೆ.
ವಿಜಯಪುರವು ಐತಿಹಾಸಿಕ ಪ್ರವಾಸಿ ತಾಣವಾಗಿರುವುದರಿಂದ ವರ್ಷವಿಡೀ ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ಹಬ್ಬ ಹಾಗೂ ರಜಾ ದಿನಗಳಲ್ಲಿ ರೈಲು ನಿಲ್ದಾಣದಲ್ಲಿ ಭಾರಿ ಜನದಟ್ಟಣೆ ಇರುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ಮತ್ತೊಂದು ಆಗಮನ ಮತ್ತು ನಿರ್ಗಮನ ದ್ವಾರವನ್ನು ನಿರ್ಮಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ಬಹುನಿರೀಕ್ಷಿತ ಬೆಂಗಳೂರು-ವಿಜಯಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಲಿದ್ದು, ಇಲ್ಲಿ ಕೋಚ್ ಡಿಪೋ ಸ್ಥಾಪನೆಯಾದರೆ ಈ ರೈಲಿನ ನಿರ್ವಹಣೆ ಮತ್ತಷ್ಟು ಸುಲಭವಾಗಲಿದೆ. ಇತ್ತೀಚೆಗೆ ನಡೆದ ರೈಲ್ವೆ ಇಲಾಖೆಯ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರೊಂದಿಗೆ ಈ ಬಗ್ಗೆ ಸಚಿವರು ಚರ್ಚಿಸಿದ್ದು, ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎನ್ನಲಾಗಿದೆ.